Advertisement
ಕಾಪು ಪುರಸಭೆ ಮತ್ತು 16 ಗ್ರಾ.ಪಂ.ಗಳನ್ನೊಳಗೊಂಡಿರುವ ತಾಲೂಕಿನಲ್ಲಿ ಪಶು ಸಂಗೋಪನ ಇಲಾಖೆಯ 8 ಸಂಸ್ಥೆಗಳಿದ್ದು, ಇಲ್ಲಿಗೆ 29 ಹುದ್ದೆಗಳು ಮಂಜೂರಾಗಿದ್ದರೂ ಅದರಲ್ಲಿ ಕೇವಲ 3 ಹುದ್ದೆಗಳಷ್ಟೇ ಭರ್ತಿಯಾಗಿವೆ. ಉಳಿದ 26 ಹುದ್ದೆಗಳು ಖಾಲಿಯಾಗಿ ಉಳಿದುಬಿಟ್ಟಿವೆ. ಪಶು ಸಂಗೋಪನ ಇಲಾಖೆಗೆ ಸಂಬಂಧಿಸಿ ಜಾನುವಾರು ಅಭಿವೃದ್ಧಿ ಅಧಿಕಾರಿ, ಪಶುವೈದ್ಯಕೀಯ ಪರೀಕ್ಷಕ, ಪಶು ವೈದ್ಯಕೀಯ ಸಹಾಯಕ ಸೇರಿದಂತೆ ಡಿ ದರ್ಜೆ ನೌಕರರ ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಬಹುತೇಕ ಪಶು ಚಿಕಿತ್ಸಾ ಕೇಂದ್ರಗಳಿಗೆ ದಿನದ ಬಹು ಹೊತ್ತು ಬಾಗಿಲು ಹಾಕಿಕೊಂಡೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
1 ಪಶು ಆಸ್ಪತ್ರೆ, 4 ಪಶು ಚಿಕಿತ್ಸಾಲಯ, 3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವೂ ಸೇರಿದಂತೆ ಒಟ್ಟು 8 ಸಂಸ್ಥೆಗಳಿವೆ. ತಾಲೂಕು ಕೇಂದ್ರದಲ್ಲಿ ಪಶು ಆಸ್ಪತ್ರೆ, ಶಿರ್ವ, ಪಡುಬಿದ್ರಿ, ಕಟಪಾಡಿ, ಪಡುಬೆಳ್ಳೆಯಲ್ಲಿ ಪಶು ಚಿಕಿತ್ಸಾಲಯಗಳು, ಅದಮಾರು, ಮುದರಂಗಡಿ, ಪಲಿಮಾರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಇವೆ. ಕಾಪು ತಾಲೂಕಿನಲ್ಲಿ 14,583 ಹಸುಗಳು, 31 ಎಮ್ಮೆ ಮತ್ತು ಕೋಣಗಳು, 534 ಕುರಿ ಮತ್ತು ಮೇಕೆಗಳು, 438 ಹಂದಿಗಳು, 12,426 ನಾಯಿಗಳು ಹಾಗೂ 2,74,816 ಕೋಳಿಗಳಿವೆ. ಎಷ್ಟು ಹುದ್ದೆಗಳು ಖಾಲಿ?
5 ಮಂದಿ ಪಶು ವೈದ್ಯಾಧಿಕಾರಿಗಳು ಇರ ಬೇಕಾದಲ್ಲಿ 1 ಹುದ್ದೆ ಭರ್ತಿಯಾಗಿದ್ದು, 4 ಹುದ್ದೆಗಳು ಖಾಲಿಯಿವೆ. ಓರ್ವ ಜಾನುವಾರು ಅಭಿವೃದ್ಧಿ ಅಧಿಕಾರಿ ಕಾರ್ಯ ನಿರ್ವಹಿಸಬೇಕಿದ್ದರೂ ಆ ಹುದ್ದೆ ಇನ್ನೂ ಭರ್ತಿಯಾಗಿಲ್ಲ. ಹಿರಿಯ ಪಶು ವೈದ್ಯಕೀಯ ಪರೀಕ್ಷಕ 2 ಹುದ್ದೆ ಭರ್ತಿಯಾ ಗಿದ್ದು, ಒಂದು ಹುದ್ದೆ ಖಾಲಿಯಿದೆ. 4 ಮಂದಿ ಪಶು ವೈದ್ಯಕೀಯ ಪರೀಕ್ಷಕರು ಇರಬೇಕಿದ್ದಲ್ಲಿ ಒಬ್ಬರೂ ಇಲ್ಲದಂತಾಗಿದೆ. ಪಶುವೈದ್ಯಕೀಯ ಸಹಾಯಕ 3 ಹುದ್ದೆಗಳೂ ಖಾಲಿಯಿವೆ. ಡಿ ದರ್ಜೆ 13 ಹುದ್ದೆಗಳಲ್ಲಿ ಒಂದೂ ಭರ್ತಿಯಾಗಿಲ್ಲ. ಭರ್ತಿಯಾಗಿರುವ 3 ಹುದ್ದೆಗಳಲ್ಲಿ 1 ಪಶು ವೈದ್ಯಾಧಿಕಾರಿ ಮತ್ತು 2 ಮಂದಿ ಹಿರಿಯ ವೈದ್ಯಕೀಯ ಪರೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
ವಾರಕ್ಕೆರಡು ದಿನ ಮಾತ್ರ ಪಶು ಆಸ್ಪತ್ರೆಗಳನ್ನು ತೆರೆದಿಡಬೇಕಾದ ಅಸಹಾಯಕತೆ ಅವರನ್ನು ಕಾಡುತ್ತಿದೆ.ಅವರೂ
ಕೂಡ ಇತರೆಡೆ ಪ್ರಭಾರ ಹುದ್ದೆ ನಿರ್ವಹಿಸ ಬೇಕಾದ ಅನಿವಾರ್ಯತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪಶು ಇಲಾಖೆಯ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ.
Advertisement
ಸಿಬಂದಿಗೂ ಚಿಂತೆಇರುವ ವೈದ್ಯಾಧಿಕಾರಿಯ ಪೈಕಿ ಒಬ್ಬರು ಇಲಾಖಾ ಮೀಟಿಂಗ್, ಜಾನುವಾರು ಸಂಬಂಧಿತ ಪೊಲೀಸ್ ಕೇಸ್, ಅರಣ್ಯ ಇಲಾಖೆ ಸಂಬಂಧಿಸಿ ಶವ ಮರಣೋತ್ತರ ಪ್ರಕ್ರಿಯೆ, ಕೆಡಿಪಿ ಮೀಟಿಂಗ್, ಗ್ರಾ.ಪಂ., ತಾ.ಪಂ. ಮೀಟಿಂಗ್ ಸಹಿತ ವಿವಿಧ ಸರಕಾರಿ ಸಭೆಗಳಿಗೆ ಮೀಸಲಾಗಿರಬೇಕಿರುತ್ತದೆ. ಇಲಾಖೆ ನಡೆಸುವ ಕಾಲು ಬಾಯಿ ಲಸಿಕಾ ಕಾರ್ಯಕ್ರಮ, ಕಂದು ರೋಗ ಲಸಿಕಾ ಕಾರ್ಯಕ್ರಮ, ಇಟಿ ಕಾಯಿಲೆಗಳಿಗೆ ಸಂಬಂಧಪಟ್ಟ ವ್ಯಾಕ್ಸಿನೇಶನ್ ನೀಡಿಕೆಯಲ್ಲಿ ಬ್ಯುಸಿಯಾಗಿ ಬಿಡುವುದರಿಂದ ಆಸ್ಪತ್ರೆ ಮತ್ತು ಮನೆ ಮನೆ ಭೇಟಿ ಮಾಡಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲು ಸಮಯಾವಕಾಶವಿಲ್ಲದೆ ಸಿಬಂದಿ ಕೂಡ ಚಿಂತೆಗೀಡಾಗಿದ್ದಾರೆ. ಚಿಕಿತ್ಸೆ ನೀಡಲಾಗದ ಸ್ಥಿತಿ
ಪಶು ಚಿಕಿತ್ಸಾಲಯಗಳಲ್ಲಿ ಸಿಬಂದಿಯ ಕೊರತೆಯಿಂದ ರೈತರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಗ್ರಾಮ ಸಭೆಗಳಿಗೆ ನೋಡಲ್ ಆಫೀಸರ್‌ಗಳಾಗಿ ಭಾಗವಹಿಸ ಬೇಕಾದ ಜವಾಬ್ದಾರಿಯೊಂದಿಗೆ ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಅನಿವಾರ್ಯತೆಯಿದೆ. ಗ್ರಾಮ ಸಭೆಯಲ್ಲಿ ಪಾಲ್ಗೊಂಡರೆ ಕನಿಷ್ಠ ಅರ್ಧ ದಿನ ಕಳೆದು ಹೋಗುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಇರುವ ಹೊರಗುತ್ತಿಗೆ ಸಿಬಂದಿ ವಾರಕ್ಕೆ 2-3 ದಿನಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯಿದ್ದರೂ ಚಿಕಿತ್ಸೆ ನೀಡಲಾಗದ ಅಸಹಾಯಕತೆ ನಮ್ಮನ್ನು ಕಾಡುತ್ತಿದೆ.
-ಡಾ| ಅರುಣ್ ಹೆಗ್ಡೆ, ಮುಖ್ಯ ಪಶು ವೈದ್ಯಾಧಿಕಾರಿ, ಕಾಪು ತಾಲೂಕು ನೇಮಕಾತಿ ಪ್ರಕ್ರಿಯೆ ಸ್ಥಗಿತ
ರಾಜ್ಯದಲ್ಲಿ ಬಹುತೇಕ ಜಾನುವಾರು ಆಸ್ಪತ್ರೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕಾಪು ತಾಲೂಕಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಯ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ನಿವೃತ್ತ ವೈದ್ಯರು ಮತ್ತು ಸಿಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಸರಕಾರ ಉತ್ಸುಕತೆ ತೋರಿದ್ದರೂ, ಅವರೇ ನಿರಾಸಕ್ತಿ ತೋರುತ್ತಿದ್ದಾರೆ. ಹೈನುಗಾರರಿಗೆ ತೊಂದರೆಯಾಗದಂತೆ ಲಭ್ಯ ಇರುವ ವೈದ್ಯರು ಮತ್ತು ಪರೀಕ್ಷಕರಿಗೆ ಹೆಚ್ಚುವರಿ ಹೊಣೆ ವಹಿಸಿ ಕ್ರಮವಹಿಸಲಾಗಿದೆ.
-ಲಾಲಾಜಿ ಆರ್. ಮೆಂಡನ್, ಶಾಸಕರು, ಕಾಪು. ಬೇಡಿಕೆ ಸಲ್ಲಿಸುತ್ತಿದ್ದರೂ ಪ್ರಯೋ ಜನ ಶೂನ್ಯ
ಸಾಕಷ್ಟು ಮಂದಿ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದು ರಾಸುಗಳಿಗೆ ಏನಾದರೂ ತೊಂದರೆಯಾದಲ್ಲಿ ವೈದ್ಯಾಧಿಕಾರಿಗಳಿಗಾಗಿ ದಿನಗಟ್ಟಲೆ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮದಾಗಿದೆ. ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಹೈನುಗಾರರು ಮತ್ತು ಕೃಷಿಕರಿಗೆ ಬೀಗ ಹಾಕಿದ ಬಾಗಿಲುಗಳೇ ಸ್ವಾಗತ ಕೋರುತ್ತವೆ. ಇತ್ತೀಚೆಗೆ ರಾಸುಗಳಿಗೆ ಕಾಲು ಬಾಯಿ ಜ್ವರದ ಬಾಧೆ ಕಾಡುತ್ತಿದ್ದು ಹೆ„ನುಗಾರರ ಆತಂಕಕ್ಕೂ ಕಾರಣವಾಗಿದೆ. ಪೂರ್ಣ ಪ್ರಮಾಣದಲ್ಲಿ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಇಲಾಖೆಗೆ ಬೇಡಿಕೆ ಸಲ್ಲಿಸುತ್ತಿದ್ದರೂ ಅದು ನಿಷ್ಪ್ರಯೋಜಕ ಎಂಬಂತಾಗಿದೆ.
-ಶ್ರೀನಿವಾಸ ರಾವ್ ಮಜೂರು, ಪ್ರಗತಿಪರ ಹೈನುಗಾರರು – ರಾಕೇಶ್ ಕುಂಜೂರು