ಬೆಳಗಾವಿ: ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಮತ ಇಲ್ಲ. ಹೀಗಾಗಿ ನಾನು ಭಿನ್ನಮತ ಶಮನಕ್ಕೆ ಬಂದಿದ್ದೇನೆ ಎಂಬುದಕ್ಕೆ ಅರ್ಥವೇ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಸ್ಪಷ್ಟಪಡಿಸಿದರು.
ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲರದ್ದೂ ಒಂದೇ ಕಾರ್ಯಸೂಚಿ- ಅದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು ಎಂಬುದು. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇಂದಿನ ಬೆಳಗಾವಿ ಸಭೆ ಸಫಲವಾಗಿದೆ. ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರಡರಲ್ಲೂ ಸುಲಭ ವಾಗಿ ಜಯ ಗಳಿಸುತ್ತೇವೆ. ಸಭೆಯಲ್ಲಿ ಚುನಾವಣ ಪ್ರಚಾರ ಯಾವ ರೀತಿ ಮಾಡಬೇಕು. ಪಕ್ಷಕ್ಕೆ ಮುಳುವಾಗದ ರೀತಿಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಲಾಗಿದೆ ಎಂದರು.
ಎಲ್ಲ ಸಂಸದರು, ಶಾಸಕರು, ಸಚಿವರು ಒಂದಾಗಿ ಚರ್ಚಿಸಿದ್ದೇವೆ. ಗೆಲ್ಲುವ ತಂತ್ರಗಾರಿಕೆ ಸಿದ್ಧಗೊಳಿಸಿ ದ್ದೇವೆ. ಮೇ 23ರಿಂದ ಪ್ರಮುಖ ನಾಯಕರು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಬರುತ್ತಾರೆ. ಆಯ್ದ ಪ್ರಮುಖರ ಸಭೆ ನಡೆಯಲಿದೆ. ಮೇ 28ರೊಳಗೆ ಎಲ್ಲ ಪ್ರಮುಖರ ಸಭೆ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆಯಾ ಕ್ಷೇತ್ರದ ಶಾಸಕರೇ ಮುಖ್ಯ ಜವಾಬ್ದಾರ ರಾಗಿರುತ್ತಾರೆ. ಅಲ್ಲಿ ನಮ್ಮ ಆಭ್ಯರ್ಥಿಗೆ ಮುನ್ನಡೆ ಕೊಡಿಸುವ ಹೊಣೆಯನ್ನು ಶಾಸಕರಿಗೆ ನೀಡಲಾಗಿದೆ ಎಂದರು.
ಟಿಕೆಟ್ ಹಂಚಿಕೆಯಲ್ಲಿ ಬೆಳಗಾವಿಗೆ ಅನ್ಯಾಯ ಮಾಡಿಲ್ಲ. ಈ ಹಿಂದೆ ಬೆಳಗಾವಿಗೆ ಟಿಕೆಟ್ ಕೊಡಲಾಗಿದೆ. ಇದಲ್ಲದೆ ಜಿಲ್ಲೆಗೆ ರಾಜ್ಯಸಭಾ ಸ್ಥಾನ ನೀಡಲಾಗಿದೆ. ಇಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವ ದಲ್ಲೇ ಎದುರಿಸುತ್ತೇವೆ. ಸಚಿವ ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಹೇಳಿದರು.