Advertisement

ಭೂ ವಿವಾದ ಬಗೆಹರಿಯದೇ ಆರೋಗ್ಯ ವಿವಿ ಸ್ಥಳಾಂತರ ಇಲ್ಲ : ಡಿಸಿಎಂ ಸ್ಪಷ್ಟನೆ

07:09 PM Oct 09, 2019 | Sriram |

ಬೆಂಗಳೂರು: ಭೂ ವ್ಯಾಜ್ಯ ಪರಿಹಾರದ ಅನಂತರವೇ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಪಸ್‌ನ್ನು ರಾಮನಗರಕ್ಕೆ ಸ್ಥಳಾಂತರಿಸಲಾಗುವುದು ಎಂದು ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವ ಡಾ|ಸಿ.ಎನ್‌.ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್‌ಗಾಂಧಿ ವಿಶ್ವವಿದ್ಯಾನಿಲಯವನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸಲು ನಮ್ಮ ವಿರೋಧ ಇರಲಿಲ್ಲ. ಆದರೆ ಕಾನೂನು ಬಾಹಿರವಾಗಿ ಸ್ಥಳಾಂತರ ಕಾರ್ಯ ಕೈಗೊಂಡಿರುವುದನ್ನು ವಿರೋಧಿಸಿದ್ದೇವೆ ಎಂದರು.

ವಿಶ್ವವಿದ್ಯಾನಿಲಯ ಕ್ಯಾಂಪಸ್‌ ನಿರ್ಮಾಣಕ್ಕೆ ಬೇಕಿರುವ ಭೂಮಿಯನ್ನು ಒದಗಿಸದೇ ತಾತ್ಕಾಲಿಕ ಸ್ಥಳಾಂತರ ಕಾರ್ಯ ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಕ್ಯಾಂಪಸ್‌ ನಿರ್ಮಾಣಕ್ಕೆ ಭೂಮಿಯೇ ಇಲ್ಲದೇ ಸ್ಥಳಾಂತರ ಹೇಗೆ ಸಾಧ್ಯ ಎಂಬುದನ್ನು ನಾವು ಕೂಡ ಈ ಹಿಂದೆ ಪ್ರಶ್ನಿಸಿದ್ದೆವು. ನಮ್ಮ ಈ ನಿಲುವಿಗೆ ಈಗಲೂ ಬದ್ಧರಾಗಿದ್ದೇವೆ. ನಿರ್ದಿಷ್ಟ ಭೂಮಿಯನ್ನು ಒದಗಿಸದೇ ಇರುವುದಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹೀಗಾಗಿ ಭೂಮಿ ಒದಗಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಬೇರೆಲ್ಲ ಜಿಲ್ಲೆಯಲ್ಲಿ ಸರಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೆ ರಾಮನಗರದಲ್ಲಿಲ್ಲ. ಹೀಗಾಗಿ ರಾಮನಗರಕ್ಕೆ ಕ್ಯಾಂಪಸ್‌ ಸ್ಥಳಾಂತರಿಸಲು ಕಾಯ್ದೆಗೆ ತಿದ್ದುಪಡಿ ಕೂಡ ಮಾಡಲಾಗಿದೆ. ಆದ್ದರಿಂದ ಕಾನೂನಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಅತಿ ಶೀಘ್ರದಲ್ಲಿ ಆಸ್ಪತ್ರೆಗಳಿಗೂ ಭೇಟಿ ನೀಡಲಿದ್ದೇನೆ.
-ಡಾ| ಸಿ.ಎನ್‌.ಅಶ್ವತ್ಥ್ ನಾರಾಯಣ, ಉಪಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next