Advertisement

DCM ಹುದ್ದೆ ಚರ್ಚೆಯೇ ಇಲ್ಲ: ಸಮಾನಮನಸ್ಕ ಸಚಿವರ ಭಿನ್ನ ಮಾತು

12:57 AM Jan 07, 2024 | Team Udayavani |

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಪಟ್ಟು ಹಿಡಿದಿದ್ದ ಸಚಿವರು ನಿಧಾನವಾಗಿ ಉಲ್ಟಾ ಹೊಡೆಯಲಾರಂಭಿಸಿದ್ದು, ಅಂತಹ ಚರ್ಚೆಯೇ ಆಗಿಲ್ಲ ಎನ್ನಲು ಶುರು ಮಾಡಿದ್ದಾರೆ.
ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದ ಸಚಿವರಿಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಅದನ್ನೆಲ್ಲಾ ಹೈಕಮಾಂಡ್‌ ನಿರ್ಧರಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಕೆಲಸ ಮಾಡೋಣ ಎಂದಿದ್ದಾರೆ.

Advertisement

ಸರ್ಕಾರ ರಚನೆಯಾದಾಗಿನಿಂದಲೂ ಒಂದೇ ಡಿಸಿಎಂ ಹುದ್ದೆ ಎನ್ನುತ್ತಿದ್ದ ಶಿವಕುಮಾರ್‌ ಅವರಿಗೆ ಆಗಾಗ ಬಿಸಿ ಮುಟ್ಟಿಸುತ್ತಿದ್ದ ಸಮಾನ ಮನಸ್ಕ ಸಚಿವರು, ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಹೇಳಿಕೆಗಳನ್ನು ಕೊಡುತ್ತಲೇ ಇದ್ದರು. ಸಾಲದ್ದಕ್ಕೆ ಎರಡು ದಿನದ ಹಿಂದೆಯಷ್ಟೇ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮನೆಯಲ್ಲಿ ಭೋಜನ ಕೂಟ ನಡೆಸಿದ್ದ ಸಮಾನಮನಸ್ಕ ಸಚಿವರು, ಡಿಸಿಎಂ ಹುದ್ದೆ ಬಗ್ಗೆಯೇ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದರು. ಇದನ್ನು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕೂಡ ಒಪ್ಪಿಕೊಂಡಿದ್ದರು.

ಆದರೀಗ ರಾಜಣ್ಣ ಹೇಳಿಕೆಯನ್ನು ತಳ್ಳಿ ಹಾಕುತ್ತಿರುವ ಉಳಿದ ಸಚಿವರು, ರಾಜಣ್ಣರನ್ನು ಏಕಾಂಗಿ ಮಾಡಿದ್ದಾರೆ. ಇದನ್ನರಿತು, ನಾನು ನನ್ನ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದೇನೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬುದಕ್ಕೆ ನಾನು ಈಗಲೂ ಬದ್ಧನಾಗಿದ್ದಾನೆ. ಉಳಿದದ್ದು ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ.

ಶುಕ್ರವಾರವಷ್ಟೇ ಡಿಸಿಎಂ ಹುದ್ದೆಗಾಗಿ ಜ.10 ರಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾರನ್ನು ನಿಯೋಗ ಭೇಟಿ ಮಾಡಿ, ಡಿಸಿಎಂ ಹುದ್ದೆ ವಿಚಾರವನ್ನು ಹೈಕಮಾಂಡ್‌ಗೆ ಮುಟ್ಟಿಸಲು ಒತ್ತಾಯ ಮಾಡುವುದಾಗಿ ಹೇಳಿದ್ದ ರಾಜಣ್ಣ, ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಡಿಸಿಎಂ ಹುದ್ದೆಯ ಚರ್ಚೆಯನ್ನೇ ಮಾಡಿಲ್ಲ ಎಂದಿದ್ದಾರೆ.

ಸಭೆ ಮಾಡಿದ್ದೇವೆ. ಆರಾಮವಾಗಿದ್ದೇವೆ. ಎಲ್ಲಾದರೂ ಡಿಸಿಎಂ ಹುದ್ದೆ ಕೇಳಿದ್ದೇವೆಯೇ? ಇಲ್ಲ, ನಾವು ಕೇಳಿಯೇ ಇಲ್ಲ. ಇನ್ನು ಕಿತ್ತಾಟ ಎಲ್ಲಿಂದ ಬಂತು? ಸರ್ಕಾರ ಎಂದರೆ ತೂಗುಗತ್ತಿ ಇದ್ದಂತೆ. ಬೀಳುತ್ತದೆ ಎಂದು 5 ವರ್ಷವೂ ಹೇಳುತ್ತಾರೆ.
-ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಸಚಿವ

Advertisement

ಎಲ್ಲ ಹೈಕಮಾಂಡ್‌ ಉತ್ತರ ಕೊಡುತ್ತಾರೆ. ನಾನು ಉತ್ತರ ಕೊಡಲಾಗುವುದಿಲ್ಲ. ಈಗ ಚರ್ಚಿಸಲು ಅದಲ್ಲ ವಿಚಾರ. ಲೋಕಸಭೆ ಚುನಾವಣೆ ಗೆಲ್ಲಬೇಕು. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಷ್ಟು ಮಾಡೋಣ. ನಡೆಯಿರಿ.
ಡಿ.ಕೆ. ಶಿವಕುಮಾರ್‌, ಡಿಸಿಎಂ

ಡಿಸಿಎಂ ಹುದ್ದೆ ಬಗ್ಗೆ ಯಾರು? ಎಲ್ಲಿ ಚರ್ಚಿಸಿದ್ದಾರೆ. ಎಲ್ಲಾ ಗಾಳಿ ಸುದ್ದಿ. ರಾಜಣ್ಣ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಹೈಕಮಾಂಡ್‌ಗೆ ಡಿಸಿಎಂ ಹುದ್ದೆ ಸೃಷ್ಟಿಸಬೇಕು, ಅದರಿಂದ ಲೋಕಸಭೆ ಚುನಾವಣೆಗೆ ಅನುಕೂಲ ಆಗುತ್ತದೆ ಎನಿಸಿದರೆ ಮಾಡಬಹುದು. ದೆಹಲಿಗೆ ಹೋಗುವುದು, ಹೈಕಮಾಂಡ್‌ ಮಾಡುವುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಇಟ್ಟುಕೊಂಡು ಹೋಗುತ್ತೇವೆ. ಸೌಜನ್ಯದ ಭೇಟಿ ಮಾಡುವುದು ನಮ್ಮ ಸಂಪ್ರದಾಯ. ಆಡಳಿತದಲ್ಲಿರುವ ಪಕ್ಷ ಹೈಕಮಾಂಡ್‌ ಜತೆ ಮಾತನಾಡಲೇಬೇಕು. ಅವರ ಸಲಹೆ ಪಡೆಯಲೇಬೇಕು. ಅದಕ್ಕಾಗಿ ಹೋಗುತ್ತೇವೆ.
-ಡಾ.ಜಿ. ಪರಮೇಶ್ವರ್‌, ಗೃಹಸಚಿವ

Advertisement

Udayavani is now on Telegram. Click here to join our channel and stay updated with the latest news.

Next