Advertisement

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ: ಶೆಟ್ಟರ್‌

10:45 PM Jul 22, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಯಾರೂ ಅಸಮಾಧಾನದಿಂದಿಲ್ಲ. ಅದರ ಬಗ್ಗೆ ಏನೂ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ನಾಯಕತ್ವದಲ್ಲಿ ಉತ್ತಮ ಸರಕಾರ ನಡೆಯುತ್ತಿದೆ. ಸದ್ಯ ಕಾಂಗ್ರೆಸ್‌ ಸರಕಾರ ಒಳ್ಳೆಯ ಆಡಳಿತ ನೀಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಲ್ಲ ಆಕಾಂಕ್ಷಿಗಳನ್ನು ಸಮಾಧಾನ ಮಾಡಲು ಎಲ್ಲ ಸಮಯದಲ್ಲೂ ಸಾಧ್ಯವಿಲ್ಲ. ಪಕ್ಷದ ಕೆಲವರಲ್ಲಿ ಸಣ್ಣಪುಟ್ಟ ಅಸಮಾಧಾನಗಳಿದ್ದರೆ ಅದನ್ನು ನಿಭಾಯಿಸುವ ಶಕ್ತಿ ಕಾಂಗ್ರೆಸ್‌ ನಾಯಕರಿಗಿದೆ. ಏನೇ ಅಸಮಾಧಾನವಿದ್ದರೂ ಅದನ್ನು ಸರಿಮಾಡಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದರು.

ಮಣಿಪುರ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗಲಭೆಗೆ ಮೂಲ ಕಾರಣಗಳನ್ನು ಕೇಂದ್ರ ಸರಕಾರ ಮೊದಲೇ ಹುಡುಕಬೇಕಿತ್ತು. ಆರಂಭದಲ್ಲಿಯೇ ಅಲ್ಲಿನ ರಾಜ್ಯ ಸರಕಾರ ಗಲಭೆ ತಡೆಯುವಲ್ಲಿ ವಿಫಲವಾಗಿದೆ. ಇದರಲ್ಲಿ ಮುಖ್ಯಮಂತ್ರಿಯ ವೈಫಲ್ಯಗಳು ಎದ್ದು ಕಾಣುತ್ತಿವೆ. ಈ ಸಮಯದಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕಿತ್ತು. ಆದರೆ ಇದಾಗದ ಹಿನ್ನೆಲೆ ಈಗ ವಿಕೋಪಕ್ಕೆ ಹೋಗಿದೆ. ಅಲ್ಲಿನ ಜನತೆ ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಸಿಎಂ ಗಲಭೆಯ ನೈತಿಕ ಹೊಣೆ ಹೊತ್ತು ತತ್‌ಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದರು.

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕಿದೆ. ಅಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆದಿರುವುದು ಪೈಶಾಚಿಕ ಕೃತ್ಯ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರಕಾರ ಕೇವಲ ಬಾಯಿ ಮಾತಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗದೆ ಅದು ಕಾರ್ಯರೂಪಕ್ಕೆ ಬರಬೇಕೆಂದು ಒತ್ತಾಯಿಸಿದರು.

ಬಿಜೆಪಿ ಲೀಡರ್‌ ಲೆಸ್‌ ಪಕ್ಷ
ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಠಿಯಲ್ಲಿದೆ ಎಂದು ಹಿಂದಿನಿಂದಲೂ ಹೇಳುತ್ತಿದ್ದೆ. ಅದೀಗ ಸಾಬೀತಾಗಿದೆ. ಅದರಿಂದ ಬಿಜೆಪಿ ಇನ್ನು ಹೊರ ಬಂದಿಲ್ಲ. ರಾಜ್ಯದಲ್ಲಿ ಆ ಪಕ್ಷದಲ್ಲಿ ನಾಯಕತ್ವ ಅನ್ನುವುದು ಹೋಗಿ ಬಿಟ್ಟಿದೆ. ಅದು ನಾಯಕನಿಲ್ಲದ ಪಕ್ಷವಾಗಿದೆ. ವಿಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆಸುವ ಶೋಚನೀಯ ಪರಿಸ್ಥಿತಿ ಬಂದಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕ ಇಲ್ಲದಿರುವುದನ್ನು ಯಾವತ್ತೂ ನೋಡಿಲ್ಲ. ಇದು ಬಿಜೆಪಿ ಲೀಡರ್‌ ಲೇಸ್‌ ಕರ್ನಾಟಕ ಅನ್ನುವುದನ್ನು ತೋರಿಸಿಕೊಟ್ಟಿದೆ. ಆ ಪಕ್ಷ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾಂಗ್ರೆಸ್‌ ಬಲಿಷ್ಠವಾಗುತ್ತಿದೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ದರ ಏರಿಕೆ ಅನಿವಾರ್ಯ
ನಂದಿನಿ ಹಾಲಿನ ದರ ಏರಿಕೆ ವಿಚಾರ ಬಹಳಷ್ಟು ದಿನಗಳಿಂದ ಇತ್ತು. ಈ ಬಗ್ಗೆ ರೈತರು ಮತ್ತು ಸರಬರಾಜು ಮಾಡುವವರ ಜತೆಗೆ ಚರ್ಚೆ ನಡೆಯುತ್ತಿದೆ. ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿವೆ. ಏನಾದರೂ ಯೋಜನೆ ಜಾರಿ ಮಾಡಬೇಕಾದರೆ ದರ ಏರಿಕೆ ಅನಿವಾರ್ಯ. ಹಾಲಿನ ದರ ಏರಿಕೆ ಇನ್ನೂ ಜಾರಿಯಾಗಿಲ್ಲ. ಅದಕ್ಕೆ ಇನ್ನೂ ಸಮಯವಿದೆ. ನೋಡೋಣ ಇನ್ನು ಯಾವ ರೂಪದಲ್ಲಿ ಅದು ಏರಿಕೆ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next