ವಾಡಿ: ದೀನ ದಲಿತರ ಉದ್ಧಾರಕ್ಕಾಗಿ ಹೋರಾಡಿದ ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಕುರಿತು ಭಿನ್ನಾಭಿಪ್ರಾಯಗಳೇಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಪಟ್ಟಣದಲ್ಲಿ ಮಂಗಳವಾರ ಮಾದಿಗ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನರಾಂ ಅವರ 115ನೇ ಜಯಂತಿಯ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬೂಜಿ ಹಸಿರುಕ್ರಾಂತಿ ಮಾಡದಿದ್ದರೇ ಭಾರತವಿಂದು ಹೊರ ದೇಶಗಳಿಂದ ಆಹಾರ ತರಿಸಬೇಕಾಗುತ್ತಿತ್ತು. ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಬಾಬೂಜಿ ಮತ್ತು ಬಾಬಾಸಾಹೇಬರು ದಲಿತರಿಗೆ ಎರಡು ಕಣ್ಣುಗಳಿದ್ದಂತೆ. ಇವರ ನಡುವೆ ಯಾವೂದೇ ಬಿರುಕಿರಲಿಲ್ಲ ಎಂದರು.
ಸಾಹಿತಿ ದಾಸನೂರು ಕೂಸಣ್ಣ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ದೇವದಾಸಿಯರು ಇರುವ ಸಮಾಜ ಎಂದರೆ ಅದು ಮಾದಿಗರದ್ದು. ದೇವರ ಹೆಸರಿನಲ್ಲಿ ದೇವದಾಸಿಯರನ್ನಾಗಿ ಮಾಡುವ ಮೂಲಕ ಹೆಣ್ಣು ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವ ಮಾದಿಗರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಗುವಿವಿ ನಿವೃತ್ತ ಗ್ರಂಥಪಾಲಕ ಡಾ| ಮಾಣಿಕ ಟಿ.ಕಟ್ಟಿಮನಿ, ದಲಿತ ಮಾದಿಗ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿದರು. ಸಫಾಯಿ ಕರ್ಮಚಾರಿ ಆಯೋಗದ ನಿರ್ದೇಶಕಿ ಗೀತಾ ವಾಡೇಕರ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಅಂಬ್ರೀಶ ಮಾಳಗಿ, ಮಾದಿಗ ಸಮಾಜದ ಅಧಕ್ಷ ಬಸವರಾಜ ಕಾಟಮಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಮುಖಂಡರಾದ ಶಿವಾನಂದ ಪಾಟೀಲ ಮರತೂರ, ಭೀಮಣ್ಣ ಸಾಲಿ, ಸಿದ್ದುಗೌಡ, ಟೋಪಣ್ಣ ಕೋಮಟೆ, ಶಂಕ್ರಯ್ಯಸ್ವಾಮಿ ಮದರಿ, ಸಿದ್ಧಣ್ಣ ಕಲಶೆಟ್ಟಿ, ಭೀಮರಾವ ದೊರೆ, ನಾಗೇಂದ್ರ ಜೈಗಂಗಾ, ಮಲ್ಲಿಕಾರ್ಜುನ ಸೈದಾಪುರ, ಚಂದಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಕಾಳಗಿ, ರಾಮಚಂದ್ರ ರೆಡ್ಡಿ, ರವಿ ವಾಲ್ಮೀಕಿ ನಾಯಕ, ಇಜ್ರೆàಲ್ ಪೀಟರ್, ಸುನೀಲ ಗುತ್ತೇದಾರ, ಚಂದ್ರಸೇನ ಮೇನಗಾರ, ವೀರಣ್ಣ ಯಾರಿ, ಬಸವರಾಜ ತುಮಕೂರ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು. ಪರಮೇಶ್ವರ ಕೆಲ್ಲೂರ ಸ್ವಾಗತಿಸಿದರು. ಪರಶುರಾಮ ಕಟ್ಟಿಮನಿ ನಿರೂಪಿಸಿದರು. ರಾಜು ಮರೆಡ್ಡಿ ವಂದಿಸಿದರು. ಡಿಂಗ್ರಿ ನರಸಪ್ಪ ಕಲಾ ಬಳಗದ ಸದಸ್ಯರು ಕ್ರಾಂತಿಗೀತೆಗಳನ್ನು ಹಾಡಿದರು.
ಆದಿ ಜಾಂಬವ ನಿಗಮಕ್ಕೆ ಬಿಜೆಪಿ ಸರ್ಕಾರ ಮೂರು ವರ್ಷಗಳಿಂದ ಅನುದಾನ ಕೊಟ್ಟಿಲ್ಲ. ದಲಿತರ ಅನುದಾನ ಹಗಲು ದರೋಡೆಯಾಗುತ್ತಿದೆ. ನಾನು ವಿಧಾನಸೌಧದಲ್ಲಿ ನಿಮ್ಮ ಪರವಾಗಿ ಚೀರಿ-ಚೀರಿ ಪ್ರಶ್ನೆ ಕೇಳುತ್ತಿದ್ದೇನೆ. ಆದರೆ ನೀವೇಕೆ ಹೋರಾಟಕ್ಕೆ ಮುಂದಾಗುತ್ತಿಲ್ಲ? ಯಾರ ಹೆದರಿಕೆಯಿದೆ ನಿಮಗೆ?
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ