ಚಿಕ್ಕನಾಯಕನಹಳ್ಳಿ: ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ಬರುವ ಬಹುತೇಕ ರಸ್ತೆಗಳು ಡಾಂಬರ್ ಕಾಣದೇ ವರ್ಷಗಳೇ ಕಳೆದಿದ್ದು, ರಸ್ತೆ ತುಂಬ ಗುಂಡಿಗಳ ಕಾರುಬಾರು ಜಾಸ್ತಿಯಾಗಿದೆ.
ವರ್ಷಗಳಿಂದ ಗುಂಡಿ ಬಿದ್ದಿರುವ ರಸ್ತೆಗಳಿಂದ ಸ್ಥಳೀಯರು ತೊಂದರೆ ಪಡುತ್ತಿದ್ದರೂ, ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ತಮಗೇನೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹೆಸರಿಗಷ್ಟೇ ಚಿಕ್ಕನಾಯಕನಹಳ್ಳಿ ಪಟ್ಟಣ ಎಂಬಂತಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರವನ್ನು 1929ರಲ್ಲಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದು, ಸುಮಾರು 88 ವರ್ಷ ಕಳೆದರೂ ಪಟ್ಟಣದಲ್ಲಿ ರಸ್ತೆ ಕಾಮಗಾರಿಗಳೇ ಇನ್ನೂ ಪೂರ್ಣ ವಾಗಿಲ್ಲ. ಅದೇ ಗುಂಡಿ ಬಿದ್ದ ರಸ್ತೆಗಳು, ರಸ್ತೆಗಳ ಮೇಲೆ ಚರಂಡಿ ನೀರು, ಮಳೆ ಬಂದರೆ ಕೆಸರು ಗದ್ದೆಯಾಗುವ ರಸ್ತೆಗಳು, ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಗುಣಮಟ್ಟದ ರಸ್ತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
35 ಕಿಮೀ ರಸ್ತೆ ಆಗಬೇಕು: 23 ವಾರ್ಡ್‌ಗಳಲ್ಲಿ 75 ಕಿಮೀ ರಸ್ತೆ ಸಂಪರ್ಕ ಹೊಂದಿದ್ದು. ಸುಮಾರು 35 ಕಿಮೀ ರಸ್ತೆಗಳು ಇನ್ನೂ ಡಾಂಬರೀಕರಣವಾಗದೆ ಹಾಳಾಗಿವೆ. ಡಾಂಬರೀಕರಣವಾದ ಇನ್ನೂ ಕೆಲ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.
ಅನುದಾನವಿದ್ದರೂ ಅಭಿವೃದ್ಧಿಯಾಗಿಲ್ಲ: ಎಸ್‌ಎಫ್ಸಿ, ನಗರೋತ್ಥಾನ, ಮುಖ್ಯಮಂತ್ರಿಗಳ ಸಣ್ಣ ಪಟ್ಟಣಗಳ ಅಭಿವೃದ್ಧಿ ಹಾಗೂ ಶಾಸಕರ ನಿಧಿ ಹಾಗೂ ಪುರಸಭೆಯಲ್ಲಿನ ಕಂದಾಯ ಸೇರಿದಂತೆ ಕೋಟಿ ಗಟ್ಟಲೇ ಅನುದಾನ ಬರುತ್ತಿದ್ದರೂ ರಸ್ತೆಗಳು ಅಭಿವೃದ್ಧ್ದಿ ಯಾಗಿಲ್ಲ. 1998-99ರ ಸಾಲಿನಲ್ಲಿ ನಿರ್ಮಾಣವಾದ ಮಾರುತಿ ನಗರ , 1978ರಲ್ಲಿ ನಿರ್ಮಾಣವಾದ ಮಹಾಲಕ್ಷ್ಮೀ ಬಡಾವಣೆ, 1993-94ರಲ್ಲಿ ನಿರ್ಮಾಣ ವಾದ ಬನಶಂಕರಿ ಬಡಾವಣೆ, ಹೊಸ ಬಡಾವಣೆಗಳು, 1995 ರಲ್ಲಿ ಪುರಸಭೆಗೆ ಹೊಸದಾಗಿ ಸೇರಿಕೊಂಡಿರುವ ಕೇದಿಗೆಹಳ್ಳಿ ದೆಬ್ಬೆಗಟ್ಟ ವಾರ್ಡ್ ಗಳಲ್ಲಿನ ಬಹುತೇಕ ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಉಳಿದಿವೆ.