Advertisement

ಅಧಿಕಾರ-ಪ್ರಶಸ್ತಿಗೆ ಆಸೆ ಪಟ್ಟಿಲ್ಲ: ಮಂಜಮ್ಮ ಜೋಗತಿ

06:17 PM Dec 08, 2022 | Team Udayavani |

ಹೊಸಪೇಟೆ: ನಾನು ಅಧಿಕಾರ, ಪ್ರಶಸ್ತಿಗಳಿಗಾಗಿ ಆಸೆ ಪಟ್ಟವಳಲ್ಲ. ಅವು ತಾನಾಗಿಯೇ ಹುಡುಕಿಕೊಂಡು ಬಂದಿವೆ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

Advertisement

ನಗರದ ಥಿಯೋಸಾಪಿಕಲ್‌ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದಕ್ಕೂ ಆಸೆಪಟ್ಟಿಲ್ಲ. ನನಗೆ ಬಂದ ಪ್ರಶಸ್ತಿಗಾಗಿಯೂ ನಾನು ಆಸೆ ಪಟ್ಟವಳಲ್ಲ. ಅಧ್ಯಕ್ಷ ಸ್ಥಾನದ ಅಧಿಕಾರವೂ ತಾನಾಗಿಯೇ ಬಂದಿತ್ತು. ತಾನಾಗಿಯೇ ಅಂತಹ ಅವಕಾಶ ಬಂದರೆ ಮುಂದೆ ನೋಡೋಣ ಎಂದರು.

ಕಲಾವಿದರು ಯಾರ ಸ್ವತ್ತಲ್ಲ. ರಾಜಕೀಯಕ್ಕೆ ಬಂದರೆ ಒಂದು ಪಕ್ಷದ ಸ್ವತ್ತಾಗುತ್ತೇವೆ. ಚಲಾವಣೆ ಆಗುತ್ತಿರುವ ನಾಣ್ಯ ಒಂದೇ ಪಕ್ಷದಲ್ಲಿ ಚಲಾವಣೆಗೆ ಆಗುತ್ತೆ. ಅಂಥ ಅವಕಾಶ ಬಂದರೆ ಮುಂದೇ ನೋಡುತ್ತೇನೆ ಎಂದು ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹಂಪಿ ಉತ್ಸವ ನಡೆಸಲು ಸರ್ಕಾರದಿಂದ ದಿನ ನಿಗದಿ ಹಿನ್ನೆಲೆ ಮಾತನಾಡಿದ ಅವರು, ಜ 7, 8ರಂದು ಹಂಪಿ ಉತ್ಸವ ನಡೆಸಿದರೆ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ. ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಬಳಿಕ ಜನವರಿ ತಿಂಗಳಿನಲ್ಲಿ ಮಾಡಲು ಸರ್ಕಾರ ಮುಂದಾಗಿದೆ.

ಆದರೆ ಹಂಪಿ ಉತ್ಸವದ ರೂವಾರಿ ಎಂ.ಪಿ ಪ್ರಕಾಶ ಅವರು ನವೆಂಬರ್‌ 3, 4, 5ರಂದು ಮಾಡುತ್ತಿದ್ದರು. ಹಾಗಾಗಿ ಹಂಪಿ ಉತ್ಸವವನ್ನು ಅದೇ ದಿನಾಂಕದಂದು ಮಾಡಬೇಕು. ಮೈಸೂರಿನಲ್ಲಿ ನಡೆದ ದಸರಾ ಮಾದರಿಯೇ ಹಂಪಿಯಲ್ಲಿ ಉತ್ಸವ ಮಾಡಬೇಕು. ಮೊದಲು ಮೈಸೂರಿನ ದಸರಾ ಹುಟ್ಟಿದ್ದೇ ಹಂಪಿಯ ಮಹಾನವಮಿ ದಿಬ್ಬದಲ್ಲಿ. ಹಂಪಿ ತುಂಬಾ ಹೆಸರು ಮಾಡಿದ ಸ್ಥಳ, ಅದೇ ಮಾದರಿ ಉತ್ಸವ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

ಆರು ತಿಂಗಳು ಅವಕಾಶ ನೀಡಬೇಕಿತ್ತು:
ಜಾನಪದ ಅಕಾಡೆಮಿ ಅಧ್ಯಕ್ಷ ಅಧಿಕಾರ ನಿರ್ವಹಿಸಲು ಇನ್ನೂ ಆರು ತಿಂಗಳು ಬಿಡಬೇಕಿತ್ತು. ಯಾಕೆಂದರೆ ನಾನು ದೊಡ್ಡ ಯೋಜನೆಯೊಂದಕ್ಕೆ ಕೈಹಾಕಿದ್ದೆ. ಅಧಿಕಾರ ಮುಗಿದಿರುವುದರಿಂದ ಅದು ಈಗ ಅರ್ಧಕ್ಕೆ ನಿಂತಿದೆ. ಇನ್ನೇನು ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಸಹಿ ಆಗಿದ್ದರೆ ಅನುದಾನ ಬರುತ್ತಿತ್ತು ಎಂದರು. ಅಖಿಲ ಭಾರತ ಮಹಿಳಾ ಸಮಾವೇಶ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ತೃತೀಯ ಲಿಂಗಿಗಳ ಸಮ್ಮೇಳನ ಮಾಡಬೇಕೆಂಬ ಆಸೆ ಹಾಗೇ ಉಳಿದಿದ್ದು,
ಅಧಿಕಾರವಧಿ ಮುಗಿದಿರುವುದರಿಂದ ಅದ್ಯಾವುದನ್ನೂ ಮಾಡಲು ಆಗಿಲ್ಲ. ಕೊರೊನಾ ಬಂದಿದ್ದರಿಂದ ಅದ್ಯಾವುದು ಈಡೇರಲಿಲ್ಲ. ಅಕಾಡೆಮಿಗೆ ವರ್ಷಕ್ಕೆ ಒಂದು ಕೋಟಿ ರು. ಅನುದಾನ ಬರುತ್ತಿತ್ತು. ಕೊರೊನಾದಿಂದ ಅನುದಾನದಲ್ಲಿ ಸರ್ಕಾರ ಕಡಿತ ಮಾಡಿತು.

ದೊಡ್ಡಮಟ್ಟದ ಯಾವುದೇ ಕಾರ್ಯಕ್ರಮ ಮಾಡಲು ಆಗಲೇ ಇಲ್ಲ. ಕಳೆದ ಎರಡು ತಿಂಗಳಿನಿಂದ ಅಧ್ಯಕ್ಷ ಸ್ಥಾನ ಖಾಲಿ ಬಿಟ್ಟಿದ್ದಾರೆ. ಸರ್ಕಾರ ಆದಷ್ಟು ಬೇಗ ಅಧ್ಯಕ್ಷರನ್ನ ನೇಮಿಸಿ ಕಾರ್ಯಚಟುವಟಿಕೆ ನಡೆಯಲು ಮುಂದಾಗಬೇಕು. ನನ್ನೆಲ್ಲ ಆಸೆಗಳನ್ನ ಮುಂದೆ ಅಧ್ಯಕ್ಷರಾದವರು ಈಡೇರಿಸುತ್ತಾರೆ ಅನ್ನುವ ನಂಬಿಕೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next