ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ವಿಳಂಬವಾಗಿ ವಿವಾಹ ವಾಗುವುದು ಸಾಮಾನ್ಯವಾಗಿದೆ. ಆದರೆ ಇದರಿಂದ ಮುಂದೆ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಜತೆಗೆ ವಿವಾಹ ವಯಸ್ಸು ಯೋಗ್ಯ ಜೋಡಿ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ, ಇದು ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ರವಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ನಡೆದ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಪ್ರದಾಯ ಮೀರಿದ ವಿವಾಹಗಳು ಹೆಚ್ಚು ನಡೆಯಬೇಕಿವೆ. ಈ ಬಾರಿ 23 ಮದುವೆಗಳು ಅಂತರ್ಜಾತೀಯ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಅಂತರ್ಜಾಲದಲ್ಲಿ ವಧೂ- ವರರನ್ನು ಹುಡುಕಿ ಮದುವೆಯಾಗುವುದು ಹೆಚ್ಚುತ್ತಿವೆ. ಇಂತಹವುಗಳನ್ನು ಪ್ರೊತ್ಸಾಹಿಸಬೇಕಾದ ಅಗತ್ಯವಿದೆ ಎಂದರು.
ದಾಂಪತ್ಯ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರ ವಲ್ಲ. ಪರಸ್ಪರ ಅರಿತು ಜೀವಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಟ ಸುದೀಪ್ ಮಾತನಾಡಿ, ಧರ್ಮಸ್ಥಳ ಎಲ್ಲರಿಗೂ ಶಕ್ತಿ ನೀಡಿ ಬೆಳೆಯುವಂತೆ ಮಾಡುವ ಸ್ಥಳ. ಕಲಾವಿದ ಎಷ್ಟೇ ಸಿನೆಮಾ ಮಾಡಿದರೂ ಆತ ಜೀವಂತವಾಗಿರುವುದು ಆಭಿಮಾನಿಗಳಿಂದ ಎಂದರು.
ಸುದೀಪ್ ಪತ್ನಿ ಪ್ರಿಯಾ ಸುದೀಪ್, ಹೇಮಾವತಿ ವೀ. ಹೆಗ್ಗಡೆ, ಬಿರ್ಲಾ ಸಂಸ್ಥೆಯ ಜಂಟಿ ಅಧ್ಯಕ್ಷ ಮನೋಜ್ ಕುಮಾರ್ ಮೆಹ್ತಾ, ಡಬ್ಲ್ಯುಎಚ್‌ಒ ಭಾರತೀಯ ಪ್ರತಿನಿಧಿ ಆನುಷಾ ಮೋಹನ್, ಸಿನೆಮಾ ನಿರ್ಮಾಪಕ ರಾಜೇಶ್ ಭಟ್, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹಷೇಂದ್ರ ಕುಮಾರ್, ಮಾನ್ಯಾ ಉಪಸ್ಥಿತರಿದ್ದರು. ಶುಭಚಂದ್ರ ರಾಜ್ ಸ್ವಾಗತಿಸಿ, ವಸಂತ ಭಟ್ ವಂದಿಸಿದರು. ಶ್ರುತಿ ಜೈನ್ ನಿರೂಪಿಸಿದರು.
ಪ್ರಮಾಣ ವಚನ
ಕಳೆದ 47 ವರ್ಷಗಳಲ್ಲಿ ಕ್ಷೇತ್ರದಲ್ಲಿ ಒಟ್ಟು 12,160 ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಬಾರಿ ಕೇರಳದ 5 ಜೋಡಿಗಳು ಸೇರಿದಂತೆ ಒಟ್ಟು 131 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಧೂ-ವರರು ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಗೈದರು.
ಸೈನಿಕನ ಮದುವೆ
ಈ ಬಾರಿ 12,101ನೇ ವಿಶೇಷ ಜೋಡಿಯಾಗಿ ರಾಯಚೂರು ಜಿಲ್ಲೆಯ ಯೋಧ ಗುರುರಾಜ್, ಕೊಪ್ಪಳ ಜಿಲ್ಲೆಯ ಖಾಸಗಿ ಶಾಲೆ ಶಿಕ್ಷಕಿ ರೂಪಾ ಭಂಗಿ ಅವರನ್ನು ವಿವಾಹವಾದರು.