ಮುಂಬೈ:2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ 19 ವರ್ಷದ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ನಂತರ ಆಕೆಯ ಕುಟುಂಬದ 14 ಮಂದಿಯನ್ನು ಕ್ರೂರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೋರ್ಟ್ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ಮೂವರಿಗೆ ಮರಣದಂಡನೆ ನೀಡಬೇಕೆಂದು ಕೋರಿದ್ದ ಸಿಬಿಐಯ ಮೇಲ್ಮನವಿಯನ್ನು ತಿರಸ್ಕರಿಸಿದೆ.
2002ರ ಮಾರ್ಚ್ 3ರಂದು ಗುಜರಾತ್ ನ ದಾವೊದ್ ಜಿಲ್ಲೆಯ ದೇವ್ ಗರ್ ಬರಿಯಾ ಗ್ರಾಮದಲ್ಲಿ 19 ವರ್ಷದ ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ 3 ವರ್ಷದ ಮಗಳು ಸೇರಿದಂತೆ ಕುಟುಂಬದ 14 ಮಂದಿಯನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಘಟನೆಯಲ್ಲಿ ಬಿಲ್ಕಿಸ್ ಹಾಗೂ ಕುಟುಂಬದ ಮಾಸ್ಟರ್ ಹುಸೈನ್ ಮತ್ತು ಸದ್ದಾಂ ಬದುಕುಳಿದಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ, ಇದೊಂದು ಅತ್ಯಪರೂಪದ ಪ್ರಕರಣವಾಗಿದೆ ಹಾಗಾಗಿ 11 ಮಂದಿ ದೋಷಿತರಲ್ಲಿ ಮೂವರಿಗೆ ಮರಣದಂಡನೆ ವಿಧಿಸಲೇಬೇಕು ಎಂದು ಕೋರ್ಟ್ ಗೆ ಮನವಿ ಮಾಡಿತ್ತು. ಇದರಿಂದ ಕಠಿಣ ಸಂದೇಶ ರವಾನಿಸಬೇಕಾಗಿದೆ ಎಂದು ಸಿಬಿಐ ವಾದಿಸಿತ್ತು.
ಪ್ರಕರಣದ ಬಗ್ಗೆ 2008ರ ಜನವರಿ 21ರಂದು ಮುಂಬೈ ವಿಚಾರಣಾಧೀನ ಕೋರ್ಟ್ ಜಸ್ವಂತ್, ಗೋವಿಂದ್, ಶೈಲೇಶ್ ಭಟ್, ರಾದೇಶ್ಯಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರ್ ಬಾಯ್ ವೋಹಾನಿಯಾ, ಪ್ರದೀಪ್ ಮೋರ್ದಿಯಾ, ಬಕಾಬಾಯ್ ವೋಹಾನಿಯಾ, ರಾಜುಬಾಯ್ ಸೋನಿ, ಮಿತೇಶ್ ಭಟ್ ಹಾಗೂ ರಮೇಶ್ ಸೇರಿದಂತೆ ಎಲ್ಲಾ 11 ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ 11 ಮಂದಿ ಆರೋಪಿಗಳು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡಾ ವಿಚಾರಣಾಧೀನ ಕೋರ್ಟ್ ನ ತೀರ್ಪನ್ನು ಎತ್ತಿಹಿಡಿಯಿತು.
ಇಡೀ ಘಟನೆಯನ್ನು ಜಸ್ವಂತ್, ಗೋವಿಂದ್ ಹಾಗೂ ರಾದೇಶ್ಯಾಮ್ ಶಾ ಪೂರ್ವ ಯೋಜಿತವಾಗಿ ನಡೆಸಿರುವ ಪೈಶಾಚಿಕ ಕೃತ್ಯವಾಗಿದೆ. ಈ ಮೂವರು ಸೇರಿ ಬಿಲ್ಕಿಸ್ ಹಾಗೂ ಆಕೆಯ ಸಹೋದರಿ, ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದರು. ಬಿಲ್ಕಿಸ್ ಮೂವರನ್ನು ವಿಚಾರಣೆ ವೇಳೆ ಗುರುತಿಸಿದ್ದಳು, ಹಾಗಾಗಿ ಮೂವರಿಗೆ ಮರಣದಂಡನೆ ನೀಡಬೇಕೆಂದು ಸಿಬಿಐ ಬಾಂಬೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸಾಕ್ಷಿಗಳ ಮೇಲೆ ಪ್ರಭಾವ ಹಾಗೂ ಬೆದರಿಕೆ ಒಡ್ಡುತ್ತಾರೆಂಬ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಗುಜರಾತ್ ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು.