Advertisement

ಶೇ.45ರಷ್ಟು ಮಂದಿಗೆ ಲಕ್ಷಣರಹಿತ ಕೋವಿಡ್‌ ಸೋಂಕು

05:04 PM Jun 14, 2020 | sudhir |

ಲಾಸ್‌ಏಂಜಲೀಸ್‌: ಕೋವಿಡ್‌ ಸೋಂಕು ಪೀಡಿತರಲ್ಲಿ ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎನ್ನುವ ಸುದ್ದಿ ಕೇಳಿರಬಹುದು. ಇದು ನಿಜ. ಜಗತ್ತಿನ ಶೇ.40ರಿಂದ ಶೇ.45ರಷ್ಟು ರಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಕೋವಿಡ್‌ ಸೋಂಕು ದೃಢಪಟ್ಟಿದೆ.

Advertisement

ಹೀಗೆ ಕೋವಿಡ್‌ ರೋಗಲಕ್ಷಣಗಳಿಲ್ಲದೇ ಇರುವುದು ಅಪಾಯಕಾರಿ ಎಂದು ಸಂಶೋಧನೆಯೊಂದು ಹೇಳಿದೆ.

ಕೋವಿಡ್‌ ರೋಗಲಕ್ಷಣವಿಲ್ಲದಲ್ಲಿ ಅದು ಮನುಷ್ಯನ ದೇಹವನ್ನು ಇನ್ನಷ್ಟು ಹಾನಿ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕಾದ ಎರಿಕ್‌ ಟೊಪೊಲ್‌ ಮತ್ತು ಸಕ್ರಿಪ್ಸ್‌ ರಿಸರ್ಚ್‌ ಟ್ರಾನ್ಸ್‌ಲೇಷನಲ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ದತ್ತಾಂಶಗಳನ್ನು ಕಲೆ ಹಾಕಿ ಸಂಶೋಧನೆ ನಡೆಸಿದ್ದಾರೆ. ಈ ವರದಿಯನ್ನು ಆ್ಯನಲ್ಸ್‌ ಆಫ್ ಇಂಟರ್ನಲ್‌ ಮೆಡಿಸಿನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಸೋಂಕಿನ ಲಕ್ಷಣವಿಲ್ಲದವರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿಸಲು ಕಾರಣವಾಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದರೊಂದಿಗೆ ಸಾರ್ವತ್ರಿಕವಾಗಿ ಜನರನ್ನು ಪರೀಕ್ಷೆಗೊಳಪಡಿಸುವುದು, ಸೋಂಕಿನ ಮೂಲವನ್ನು ಗುರುತಿಸುವ, ಸಂಪರ್ಕಿತರನ್ನು ಗುರುತಿಸುವ ಕ್ರಮಗಳು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲವು ಎಂದು ಹೇಳಲಾಗಿದೆ.

ಸಂಶೋಧನ ಲೇಖನದಲ್ಲಿ ಕೋವಿಡ್‌ ಪರೀಕ್ಷೆಯ ಪ್ರಾಮುಖ್ಯ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ರೋಗ ಲಕ್ಷಣಗಳು ಇಲ್ಲದಿದ್ದರೆ ಅದು ಅತ್ಯಂತ ಅಪಾಯಕಾರಿ. ಇದಕ್ಕಾಗಿ ಪರೀಕ್ಷೆಯ ಮಹತ್ವವನ್ನು ಹೇಳಲಾಗಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.

Advertisement

ಈ ಸಂಶೋಧನೆಗಾಗಿ ವಿಶ್ವದ 16 ದೇಶಗಳ ವಿವಿಧ ಪರೀಕ್ಷಾ ಕೇಂದ್ರಗಳಿಂದ ದತ್ತಾಂಶಗಳನ್ನು ಪಡೆದುಕೊಳ್ಳಲಾಗಿದೆ. ಜತೆಗೆ ನರ್ಸಿಂಗ್‌ ಹೋಂಗಳು, ಹಡಗಿನಲ್ಲಿ ಕೆಲಸ ಮಾಡುವವರು, ಜೈಲುಗಳಲ್ಲಿದ್ದವರ ಕುರಿತ ದತ್ತಾಂಶಗಳನ್ನೂ ಪಡೆದುಕೊಂಡು ಕೋವಿಡ್‌ ರೋಗ ಲಕ್ಷಣ ರಹಿತವಾಗಿರುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿರುವ ಕೋವಿಡ್‌ ಪೀಡಿತರು ಸಾಮಾನ್ಯವಾಗಿ ಕಂಡು ಬಂದಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಅಮೆರಿಕಾವೊಂದರಲ್ಲೇ ನಾಲ್ಕು ರಾಜ್ಯಗಳ 3 ಸಾವಿರ ಕೈದಿಗಳ ಮಾಹಿತಿ ಕಲೆಹಾಕಲಾಗಿದ್ದು, ಇವರಲ್ಲಿ ಶೇ.96ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಸಂಶೋಧನೆ ಹೇಳಿದೆ.

ಹೀಗೆ ಯಾವುದೇ ರೋಗ ಲಕ್ಷಣಗಳಿಲ್ಲದವರು ಕೂಡ 14 ದಿನಗಳಿಗೂ ಹೆಚ್ಚಿನ ಅವಧಿಯಲ್ಲಿ ಸೋಂಕನ್ನು ಇತರರಿಗೆ ಹರಡಬಲ್ಲರು. ಇನ್ನು ದೇಹದಲ್ಲಿ ವೈರಸ್‌ ವೃದ್ಧಿಯ ಪ್ರಮಾಣ ರೋಗ ಲಕ್ಷಣ ಇರುವವರಲ್ಲೂ, ಇಲ್ಲದವರಲ್ಲೂ ಸಾಮಾನ್ಯವಾಗಿ ಒಂದೇ ರೀತಿ ಇರಬಹುದು ಎನ್ನಲಾಗಿದೆ.

ಅಲ್ಲದೇ ಸಂಶೋಧನೆ ವೇಳೆ ರೋಗ ಲಕ್ಷಣವಿಲ್ಲದೇ ಇರುವವರನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು ಅವರ ಶ್ವಾಸಕೋಶದ ಕೆಲಸಗಳು ಅಸಮರ್ಪಕವಾಗಿರುವುದು ಕಂಡುಬಂದಿದೆ.

ಇಂತಹ ಸಮಸ್ಯೆಗಳನ್ನು ತಪ್ಪಿಸಲು ಎಲ್ಲರನ್ನೂ ಪರೀಕ್ಷೆಗೊಳಪಡಿಸುವುದು ಮತ್ತು ಒಂದು ನಿಗದಿತ ಕಾಲಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ನಡೆಸಬೇಕಾದ ಅನಿವಾರ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next