ವರದಿ : ಬಸವರಾಜ ಹೂಗಾರ
ಹುಬ್ಬಳ್ಳಿ: ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಖರೀದಿ ಅಬ್ಬರದಲ್ಲಿ ಕೋವಿಡ್ ನಿಯಮಗಳು ಅರ್ಥ ಕಳೆದುಕೊಂಡಿವೆ. ನಗರದಲ್ಲಿ ಜನರು ಇದ್ಯಾವುದನ್ನೂ ಲೆಕ್ಕಿಸದೇ ಗುಂಪು ಗುಂಪಾಗಿ ಖರೀದಿಗೆ ಮುಂದಾಗುತ್ತಿದ್ದಾರೆ.
ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಕೊರೊನಾ ಅಲೆಯ ತೀವ್ರತೆಯನ್ನು ಜನರಿನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಮದುವೆ ಸಮಾರಂಭಕ್ಕೆ ಬಟ್ಟೆ ಖರೀದಿಗೆ ನೂರಾರು ಜನರು ಬೇರೆಡೆಯಿಂದ ನಗರಕ್ಕೆ ಆಗಮಿಸುತ್ತಿದ್ದು, ಎಲ್ಲ ಬಟ್ಟೆ ಅಂಗಡಿಗಳು ಫುಲ್ ಆಗಿರುತ್ತಿದೆ. ದಾಜೀಬಾನ ಪೇಟೆ, ಜವಳಿ ಸಾಲು, ಕಂಚಾಗರಗಲ್ಲಿ, ಕಾಳಮ್ಮನ ಅಗಸಿ ಬ್ರಾಡವೇ, ಕೊಪ್ಪಿಕರ ರಸ್ತೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.
ಮಾಲೀಕರ ನಿರ್ಲಕ್ಷ್ಯ: ಅದೆಷ್ಟೋ ಅಂಗಡಿಗಳಲ್ಲಿ ಕೆಲಸ ಮಾಡುವವರು, ಮಾಲೀಕರೇ ಮಾಸ್ಕ್ ಧರಿಸದಿರುವುದು ಕಂಡು ಬರುತ್ತಿದೆ. ಇನ್ನು ಖರೀದಿಗೆ ಬರುವ ಜನರು ಅದರಲ್ಲೂ ಗ್ರಾಮೀಣ ಭಾಗದಿಂದ ಬರುವವರಂತೂ ಮಾಸ್ಕ್ಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ತೋರುತ್ತಿದ್ದಾರೆ. ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳಲ್ಲಿ ನೂರಾರು ಜನರು ಇದ್ದರೂ ಅದರ ಪರಿಶೀಲನೆ ಮಾಡದ ಇಲಾಖೆಯವರು ಚಿಕ್ಕಪುಟ್ಟ ಅಂಗಡಿಗಳಿಗೆ ತೆರಳಿ ಪರಿಶೀಲನೆ ಮಾಡಿ ಕೈತೊಳೆದುಕೊಳ್ಳುತ್ತಿರುವುದು ಕಂಡು ಬಂದಿದೆ.
ಇನ್ನು ನಗರದ ಕೆಲ ಬಟ್ಟೆ ಅಂಗಡಿ ಸೇರಿದಂತೆ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಪೊಲೀಸರು ಜನಜಂಗುಳಿ ಚಿತ್ರೀಕರಣ ಹಾಗೂ ಛಾಯಾಚಿತ್ರ ತೆಗೆದುಕೊಂಡು ಬಂದಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಚಾರ ಕಡಿಮೆ ಇದ್ದಿದ್ದರಿಂದ ಖಾಸಗಿ ವಾಹನಗಳಿಗೆ ಶುಕ್ರದೆಸೆ ಬಂದಿದೆ. ಆಟೋರಿಕ್ಷಾಗಳವರು, ಟ್ರ್ಯಾಕ್ಸ್ ಇನ್ನಿತರ ಖಾಸಗಿ ವಾಣಿಜ್ಯ ವಾಹನಗಳಲ್ಲಿ ನಾಲ್ವರು ಕುಳಿತುಕೊಳ್ಳುವ ಕಡೆ ಆರು ಜನರನ್ನು ಕುಳಿಸುತ್ತಿದ್ದು, ಅನೇಕರು ಮಾಸ್ಕ್ ಧರಿಸಿರುವುದೇ ಇಲ್ಲ. ಇದಾವುದಕ್ಕೂ ಸಮರ್ಪಕ ಕ್ರಮ ಇಲ್ಲವಾಗಿದೆ. ಬೇಕರಿ, ಮದ್ಯದಂಗಡಿಗಳು, ಬೀದಿಬದಿ ಅಂಗಡಿಗಳು, ತರಕಾರಿ-ಹಣ್ಣಿನ ಮಾರುಕಟ್ಟೆ, ಸಂತೆಗಳಲ್ಲಿ ಮಾಸ್ಕ್ ಧರಿಸಿದವರ ಸಂಖ್ಯೆ ಕಡಿಮೆಯೇ ಇದೆ.