Advertisement

ಪಾಕಿಸ್ಥಾನದಲ್ಲಿಲ್ಲ ಕೋವಿಡ್‌ ಜಾಗೃತಿ

02:33 PM May 21, 2020 | sudhir |

ಇಸ್ಲಾಮಾಬಾದ್‌ : ಕೋವಿಡ್‌ ವೈರಸ್‌ ಜಗತ್ತನ್ನು ಪರಿಪರಿಯಾಗಿ ಕಾಡುತ್ತಿದ್ದರೂ ಪಾಕಿಸ್ಥಾನದಲ್ಲಿ ಇನ್ನೂ ಆ ಬಗ್ಗೆ ಜಾಗೃತಿ ಮೂಡಿಲ್ಲ. ಈಗಲೂ ಹಸ್ತಲಾಘವ, ಅಪ್ಪುಗೆ, ಸಾರ್ವಜನಿಕವಾಗಿ ಉಗುಳುವುದು, ಸಾಮೂಹಿಕ ಪ್ರಾರ್ಥನೆಗಳೆಲ್ಲ ಅಲ್ಲಿ ಮುಂದುವರಿದಿವೆ.

Advertisement

ವಿಚಿತ್ರವೆಂದರೆ ಹೆಚ್ಚಿನ ಪಾಕಿಸ್ಥಾನಿಯರು ಕೋವಿಡ್‌ ಒಂದು ರೋಗವೆಂದು ಒಪ್ಪಿಕೊಳ್ಳಲು ತಯಾರಿಲ್ಲ. ಇದು ದೇವರು ಸಿಟ್ಟಿಗೆದ್ದು ಕೊಟ್ಟಿರುವ ಶಾಪ, ಅದನ್ನು ನಾವು ಅನುಭವಿಸಲೇ ಬೇಕು ಎನ್ನುವುದು ಅವರ ತರ್ಕ ನಂಬಿಕೆ.

ಮಾರುಕಟ್ಟೆ, ಶಾಪಿಂಗ್‌ ಮಾಲ್‌ಗ‌ಳಲ್ಲಿ ಜನರು ಈಗಲೂ ಕೈಗವಸು, ಮುಖಗವಸು ಧರಿಸದೆ ಓಡಾಡುತ್ತಾ ಖರೀದಿ ಮಾಡುತ್ತಿದ್ದಾರೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಕೂಡ ಸುರಕ್ಷಾ ಕ್ರಮಗಳಿಗೆ ಒಳಪಡಿಸಿಲ್ಲ. ಕೋವಿಡ್‌ಗೆ ಸಂಬಂದಿಸಿದಂತೆ ಅಲ್ಲಿನ ಸರಕಾರವೇ ಸ್ಪಷ್ಟವಾದ ನೀತಿಯನ್ನು ಹೊಂದಿಲ್ಲ. ಹೀಗಾಗಿ ಪೊಲೀಸರು ಕೂಡ ಜನರ ದುಂಡಾವರ್ತನೆಗಳನ್ನು ಕೈಕಟ್ಟಿ ನೋಡುವಂಥ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ಕೋವಿಡ್‌ಗೆ ಸಂಬಂಧಿಸಿ ಅಲ್ಲಿನ ಸರಕಾರ ಬೇಜವಾಬ್ದಾರಿಯ ಪರಮಾವಧಿಯನ್ನು ತೋರಿಸುತ್ತಿದೆ. ಲಾಕ್‌ಡೌನ್‌ ಹೇರುವ ಸಂಬಂಧವಾಗಿ ಚರ್ಚಿಸಲು ಕರೆದ ಅಧಿವೇಶನದಲ್ಲಿ ಆರೋಗ್ಯ ಸಚಿವರೂ ಆಗಿರುವ ಪ್ರಧಾನಿ ಇಮ್ರಾನ್‌ ಖಾನ್‌ ಭಾಗವಹಿಸಲೇ ಇಲ್ಲ ಎನ್ನುವ ಅಂಶ ಪಾಕ್‌ ಸರಕಾರ ಕೋವಿಡ್‌ ಅನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದನ್ನು ತಿಳಿಸುತ್ತದೆ.

ತಜ್ಞರು ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ ಮಸೀದಿಗಳಲ್ಲಿ ನಡೆಯುವ ರಮ್ಜಾನ್‌ ಸಾಮೂಹಿಕ ಪ್ರಾರ್ಥನೆಗಳನ್ನು ನಿಲ್ಲಿಸಲು ಸರಕಾರದಿಂದ ಸಾಧ್ಯವಾಗಿಲ್ಲ. ಬದಲಾಗಿ ಸರಕಾರವೇ ಇಂಥ ಪ್ರಾರ್ಥನೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಇದರಿಂದಾಗಿ ಹಬ್ಬ ಮುಗಿದ ಬಳಿಕ ಕೋವಿಡ್‌ ಪ್ರಕರಣಗಳು ದುಪ್ಪಟ್ಟಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Advertisement

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ವಿಚಾರವಾಗಿ 20 ಅಂಶಗಳ ಕಾರ್ಯ ಸೂಚಿಯೊಂದನ್ನು ರಚಿಸಿ ಅದಕ್ಕೆ ಧಾರ್ಮಿಕ ಮುಖಂಡರು ಅಂಕಿತ ಹಾಕಿದ್ದರು. ಆದರೆ ಸಹಿ ಹಾಕಿದ ಮಸಿ ಒಣಗುವ ಮೊದಲೇ ಶೇ.90ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ಈ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಲಾಗಿದೆ.

ಧಾರ್ಮಿಕ ವ್ಯಕ್ತಿಗಳು ಸುರಕ್ಷಾ ಕ್ರಮಗಳನ್ನು ಅನುಸರಿಸುವ ಬದಲು ದೇವರನ್ನು ಪ್ರಾರ್ಥಿಸಿದರೆ ಈ ಕಾಯಿಲೆ ಗುಣವಾಗುತ್ತದೆ ಎಂದು ಬೋಧಿಸುತ್ತಿದ್ದಾರೆ. ಟಿವಿ ವಾಹಿನಿಗಳಲ್ಲಿ ಇಂಥ ಧಾರ್ಮಿಕ ಪ್ರವಚನಗಳನ್ನು ಪ್ರಸಾರವಾಗುತ್ತಿವೆ. ಕೋವಿಡ್‌ ಹರಡುವುದನ್ನು ತಡೆಯುವ ಸಲುವಾಗಿ ಸರಕಾರ ಯಾವುದೇ ನಿಯಮ ತಂದರೂ ಪ್ರಬಲರಾಗಿರುವ ಧಾರ್ಮಿಕ ಮುಖಂಡರು ಅದು ರದ್ದಾಗುವಂತೆ ಪ್ರಭಾವ ಬೀರುತ್ತಾರೆ ಇಲ್ಲವೆ ಅದನ್ನು ದುರ್ಬಲಗೊಳಿಸುತ್ತಾರೆ. ಈಗಾಗಲೇ ಪಾಕ್‌ನಲ್ಲಿ 45,000 ಜನರಿಗೆ ಸೋಂಕು ತಗಲಿದ್ದು, 985 ಜನ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next