Advertisement

ರಾಜ್ಯದಲ್ಲಿ ಕೋವಿಡ್ ಮುಕ್ತ ಏಕೈಕ ಜಿಲ್ಲೆ ಚಾಮರಾಜನಗರ!ಇನ್ನೆಷ್ಟು ದಿನ ಇರಲಿದೆ ಈ ಪಟ್ಟ?

07:00 PM May 25, 2020 | sudhir |

ಚಾಮರಾಜನಗರ: ಇಡೀ ರಾಜ್ಯದಲ್ಲಿ ಇದುವರೆಗೆ ಒಂದು ಕೋವಿಡ್ ಪಾಸಿಟಿವ್ ಪ್ರಕರಣವಿಲ್ಲದ ಏಕೈಕ ಜಿಲ್ಲೆಯಾಗಿ ಚಾಮರಾಜನಗರ ಉಳಿದುಕೊಂಡಿದೆ. ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದಾಖಲಾದ ಕಾರಣ, ಚಾಮರಾಜನಗರವೊಂದೇ ಕರ್ನಾಟಕದಲ್ಲಿ ಕೋವಿಡ್ ಮುಕ್ತ ಜಿಲ್ಲೆಯಾಗಿದೆ. ಆದರೆ ಈ ಪಟ್ಟ ಇನ್ನೆಷ್ಟು ದಿನ ಎಂಬ ಆತಂಕವೂ ಎದುರಾಗಿದೆ.

Advertisement

ರಾಜ್ಯದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡ ಇಷ್ಟು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿಲ್ಲ. ದೇಶದ ಮೊದಲ ಕೋವಿಡ್ ಪ್ರಕರಣ ಕಂಡುಬಂದದ್ದು ಜಿಲ್ಲೆಯ ಗಡಿಯಲ್ಲಿರುವ ಕೇರಳದಲ್ಲಿ. ಜುಬಿಲಿಯಂಟ್ ಕಾರ್ಖಾನೆಯ ನೌಕರರಲ್ಲಿ ಸಾಮೂಹಿಕವಾಗಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಜಿಲ್ಲೆಗೆ ಹೊಂದಿಕೊಂಡಂತೇ ಇರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ. ಮಹಾರಾಷ್ಟ್ರದಿಂದ ಸೋಂಕಿತರು ಬಂದು ಪ್ರಕರಣ ಹೆಚ್ಚಿರುವ ಮಂಡ್ಯ ಜಿಲ್ಲೆ ಸಹ ಚಾ.ನಗರ ಜಿಲ್ಲೆಗೆ ಹೊಂದಿಕೊಂಡಿದೆ. ಇನ್ನೊಂದೆಡೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆ ನೆರೆಯಲ್ಲಿದೆ!

ಸುತ್ತಮುತ್ತ ಕೋವಿಡ್ ಸೈನ್ಯವೇ ಇದ್ದರೂ, ಚಾಮರಾಜನಗರ ಜಿಲ್ಲೆಯ ಭದ್ರಕೋಟೆಯೊಳಗೆ ಇನ್ನೂ ನುಸುಳಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳು, ಜಿಲ್ಲೆಯಲ್ಲಿ ಕಾರ್ಖಾನೆಗಳಿಲ್ಲದಿರುವುದು, ವಲಸಿಗರ ಸಂಖ್ಯೆ ಕಡಿಮೆ ಇರುವುದು, ಇದೆಲ್ಲಕ್ಕಿಂತಲೂ ಅದೃಷ್ಟದ ಬಲ ಇದಕ್ಕೆ ಕಾರಣ ಎನ್ನಬಹುದು.

ಇನ್ನೆಷ್ಟು ದಿನ ಹಸಿರು ವಲಯ?: ಈಗ ಹೊರ ರಾಜ್ಯದ ಹೊರ ಜಿಲ್ಲೆಯ ಜನರು ಜಿಲ್ಲೆಗೆ ಬರುತ್ತಿರುವುದರಿಂದ ಹಸಿರು ವಲಯವಾಗೇ ಉಳಿಯಲು ಇನ್ನೆಷ್ಟು ದಿನ ಸಾಧ್ಯ ಎಂಬ ಪ್ರಶ್ನೆ ಮೂಡಿದೆ. ಲಾಕ್‌ಡೌನ್ ಇತ್ತು, ಹೊರ ಜಿಲ್ಲೆಗಳಿಂದ ಬರುವವರ ಪ್ರವೇಶಕ್ಕೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಅಂಥ ಕ್ರಮಗಳಿಲ್ಲ. ಬಸ್‌ಗಳು ಸಂಚರಿಸುತ್ತಿವೆ. ಜನ ಸಂಚಾರವಿದೆ. ಮದುವೆಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಶೂನ್ಯ ಪಾಸಿಟಿವ್ ಅನ್ನು ಕಾಯ್ದುಕೊಳ್ಳುವುದು ಕಷ್ಟ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

Advertisement

ಭೌತಿಕ ಅಂತರವಿಲ್ಲ: ಜಿಲ್ಲಾಡಳಿತ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಭೌತಿಕ ಅಂತರ ಕಾಪಾಡುವುದನ್ನು ಪಾಲಿಸಬೇಕೆಂಬ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಎವರ್‌ಗ್ರೀನ್ ಆಗಿ ಉಳಿಯಲು ಸಾಧ್ಯವಾಗುತ್ತದೆ. ಜಿಲ್ಲಾ ಕೇಂದ್ರದ ಅಂಗಡಿ ಮುಂಗಟ್ಟುಗಳಲ್ಲಿ ಜನರು ಭೌತಿಕ ಅಂತರ ಕಾಪಾಡುತ್ತಿಲ್ಲ. ಕೋವಿಡ್ ಇದೆ ಎಂಬುದನ್ನೇ ಮರೆತಂತೆ ಅಂಗಡಿಗಳಲ್ಲಿ ಒತ್ತೊತ್ತಾಗಿ ನಿಂತಿರುತ್ತಾರೆ. ಅಂಗಡಿ ಮಾಲೀಕರು ಸಹ ಬಾಕ್ಸ್ ಗಳನ್ನು ಬರೆದು ಭೌತಿಕ ಅಂತರ ಕಾಪಾಡಲು ಹೇಳುತ್ತಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಅನೇಕರು ಮಾಸ್ಕ್ ಧರಿಸುವುದಿಲ್ಲ. ಧರಿಸಿದರೂ ಅದನ್ನು ಬಾಯಿಯಿಂದ ತೆಗೆದು ಕೆಳಗೆ ಬಿಟ್ಟಿರುತ್ತಾರೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ 50 ಜನರಿರಬೇಕು ಎಂಬ ನಿಯಮ ಕಾಗದಲ್ಲಷ್ಟೇ ಇದೆ. ಅಲ್ಲಿ ಭೌತಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ ಇಲ್ಲವೇ ಇಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಗೆ ವಿವಿಧ ಇಲಾಖೆಗಳ ಸಚಿವರು ಭೇಟಿ ನೀಡಿದಾಗ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು ಭೌತಿಕ ಅಂತರ‌ ಕಾಯ್ದುಕೊಳ್ಳುವುದಿಲ್ಲ. ಗುಂಪು ಗುಂಪಾಗಿ ಸೇರುತ್ತಾರೆ. ಸಭೆಗಳಲ್ಲೂ ಪಕ್ಕಪಕ್ಕದಲ್ಲೇ ಕುಳಿತುಕೊಳ್ಳುತ್ತಾರೆ.

ಹೀಗಾಗಿ, ರಾಜ್ಯದ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಪಟ್ಟವನ್ನು ಶೀಘ್ರವೇ ಕಳೆದುಕೊಂಡರೂ ಆಶ್ಚರ್ಯವಿಲ್ಲ.

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next