Advertisement

ನವಭಾರತದಲ್ಲಿ ಭ್ರಷ್ಟರಿಗಿಲ್ಲ ರಕ್ಷೆ

01:10 AM Aug 24, 2019 | Team Udayavani |

ಪ್ಯಾರಿಸ್‌: ‘ಭ್ರಷ್ಟಾಚಾರಿಗಳು, ಸ್ವಜನಪಕ್ಷಪಾತಿಗಳು, ಭಯೋತ್ಪಾದಕರು ಹಾಗೂ ಜನರ ಹಣ ಲೂಟಿ ಮಾಡುವವರಿಗೆ ನಮ್ಮ ನವಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ ಮೂಗುದಾರ ಹಾಕಲಾಗುತ್ತಿದೆ. ಇಂಥ ನವಭಾರತ ನಿರ್ಮಾಣಕ್ಕಾಗಿಯೇ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಭೂತಪೂರ್ವ ಜನಾದೇಶ ಸಿಕ್ಕಿರುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಫ್ರಾನ್ಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಈ ಮಾತುಗಳನ್ನಾಡಿದ್ದಾರೆ. ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಇದೇ ವೇಳೆ, ಕೇಂದ್ರ ಸರ್ಕಾರ ಕೈಗೊಂಡ ತ್ರಿವಳಿ ತಲಾಖ್‌ ನಿಷೇಧದಂಥ ಪ್ರಮುಖ ನಿರ್ಧಾರಗಳ ಕುರಿತೂ ಮೋದಿ ಪ್ರಸ್ತಾಪಿಸಿದ್ದಾರೆ.

ನಗಬೇಕೋ, ಅಳಬೇಕೋ?: ಜಮ್ಮು -ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕುರಿತು ಉಲ್ಲೇಖೀಸಿದ ಅವರು, ‘ಭಾರತದಲ್ಲಿ ಟೆಂಪರರಿ(ತಾತ್ಕಾಲಿಕ)ಗೆ ಜಾಗವಿಲ್ಲ. 1.25 ಶತಕೋಟಿ ಜನರಿರುವ ಭಾರತದಲ್ಲಿ, ಮಹಾತ್ಮ ಗಾಂಧಿ, ಗೌತಮ ಬುದ್ಧ, ರಾಮ, ಕೃಷ್ಣರ ನೆಲದಲ್ಲಿ ಒಂದು ‘ತಾತ್ಕಾಲಿಕ ಸ್ಥಾನಮಾನ’ವನ್ನು ರದ್ದು ಮಾಡಲು 70 ವರ್ಷಗಳೇ ಬೇಕಾದವು. ಇದಕ್ಕೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಈಗ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಮೂಲಕ ಹಾಗೂ ಶಾಶ್ವತತೆಯ ಮೂಲಕ ಭಾರತವು ತನ್ನ ಧ್ಯೇಯವನ್ನು ಸಾಧಿಸುವತ್ತ ಮುನ್ನಡೆದಿದೆ’ ಎಂದು ಹೇಳಿದ್ದಾರೆ.

ಇನ್‌-ಫ್ರಾ: ಇನ್‌-ಫ್ರಾ ಎಂಬ ಪದಬಳಕೆ ಮೂಲಕ ಮೋದಿ ಅವರು ಭಾರತ ಮತ್ತು ಫ್ರಾನ್ಸ್‌ ನಡುವಿನ ಬಲಿಷ್ಠ ಬಾಂಧವ್ಯದ ಕುರಿತು ಪ್ರಸ್ತಾಪಿಸಿದ್ದಾರೆ.

Advertisement

‘ಇನ್‌ಫ್ರಾ(ಮೂಲಸೌಕರ್ಯ) ಕುರಿತು ಜಗತ್ತಿನಾದ್ಯಂತ ಹೆಚ್ಚಾಗಿ ಚರ್ಚೆಯಾಗುತ್ತದೆ. ಅದನ್ನು ನಾವು ‘ಇನ್‌’ ಮತ್ತು ‘ಫ್ರಾ’ ಎಂದು ವಿಭಜಿಸಿದರೆ, ಇಂಡಿಯಾ ಮತ್ತು ಫ್ರಾನ್ಸ್‌ ಎಂದಾಗುತ್ತದೆ. ಸೌರಶಕ್ತಿಯ ಇನ್‌ಫ್ರಾದಿಂದ ಸಾಮಾಜಿಕ ಇನ್‌ಫ್ರಾವರೆಗೆ, ತಾಂತ್ರಿಕ ಇನ್‌ಫ್ರಾದಿಂದ ಬಾಹ್ಯಾಕಾಶ ಇನ್‌ಫ್ರಾವರೆಗೆ, ಡಿಜಿಟಲ್ ಇನ್‌ಫ್ರಾದಿಂದ ಡಿಫೆನ್ಸ್‌ ಇನ್‌ಫ್ರಾವರೆಗೆ ಭಾರತ-ಫ್ರಾನ್ಸ್‌ ಬಾಂಧವ್ಯ ಬಲಿಷ್ಠವಾಗಿ ಮುಂದುವರಿದಿದೆ’ ಎಂದು ಮೋದಿ ಹೇಳಿದ್ದಾರೆ.

ಸ್ಪಷ್ಟ ನೀತಿ, ಸೂಕ್ತ ದಿಕ್ಕು ನಮ್ಮ ಮಂತ್ರ: ಮೋದಿ
•ಭಾರತವು ಪ್ರಗತಿಯ ಪಥದತ್ತ ಸಾಗುತ್ತಿರುವುದು ಮೋದಿಯಿಂದಲ್ಲ. ಜನತೆಯು ತಮ್ಮ ಮತಗಳ ಮೂಲಕ ನೀಡಿರುವಂಥ ಅನುಮತಿಯಿಂದ.

•ಸ್ಪಷ್ಟ ನೀತಿ ಮತ್ತು ಸಮರ್ಕಕ ದಿಕ್ಕು ಎಂಬ ಮಂತ್ರದಿಂದ ಸ್ಫೂರ್ತಿ ಪಡೆದು ನಾವು ಒಂದಾದ ಮೇಲೆ ಒಂದರಂತೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ.

•ತ್ರಿವಳಿ ತಲಾಖ್‌ ನಿಷೇಧವೂ ಇಂತಹ ಒಂದು ನಿರ್ಧಾರಗಳಲ್ಲಿ ಒಂದು. ಮುಸ್ಲಿಂ ಮಹಿಳೆ ಯರಿಗೆ ಅನ್ಯಾಯವಾಗುವುದನ್ನು ನವಭಾರತವು ಹೇಗೆ ತಾನೇ ಸಹಿಸಿಕೊಳ್ಳಲು ಸಾಧ್ಯ?

•ನವಭಾರತದಲ್ಲಿ ಜನರಿಗೆ ಸುಲಲಿತವಾಗಿ ಬದುಕುವ ಅವಕಾಶವಿರುತ್ತದೆ, ಉದ್ಯಮ ಸ್ನೇಹಿ ವಾತಾವರಣವಿರುತ್ತದೆ.

•ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಹಾಕಲಾದ ಗುರಿ(2030ರ ಗುರಿ)ಗಳನ್ನು ಭಾರತವು ಮುಂದಿನ ಒಂದೂ ವರೆ ವರ್ಷಗಳಲ್ಲೇ ಸಾಧಿಸಲಿದೆ.

•2025ರೊಳಗೆ ಭಾರತವು ಕ್ಷಯರೋಗ ಮುಕ್ತವಾಗುತ್ತದೆ. ಅಂದರೆ 2030ರ ಜಾಗತಿಕ ಟಾರ್ಗೆಟ್‌ಗೂ 5 ವರ್ಷ ಮುನ್ನವೇ ನಾವು ಈ ಗುರಿ ತಲುಪುತ್ತೇವೆ.

ಸ್ಮಾರಕ ಉದ್ಘಾಟನೆ

ಇಲ್ಲಿನ ಮಾಂಟ್ ಬ್ಲಾಂಕ್‌ ಶಿಖರ ದಲ್ಲಿ ಎರಡು ಏರ್‌ಇಂಡಿಯಾ ಪತನಗಳ ಸಂತ್ರಸ್ತರ ಸ್ಮರಣಾರ್ಥ ನಿರ್ಮಿಸಲಾಗಿರುವ ಸ್ಮಾರಕವನ್ನು ಶುಕ್ರವಾರ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. 1950 ಮತ್ತು 1966ರಲ್ಲಿ ಏರ್‌ಇಂಡಿಯಾ ವಿಮಾನ ಪತನಗೊಂಡಿದ್ದು, ಭಾರತದ ಖ್ಯಾತ ಅಣುವಿಜ್ಞಾನಿ ಹೋಮಿ ಜೆ ಭಾಭಾ ಸೇರಿದಂತೆ ಅನೇಕ ಭಾರತೀಯರು ಈ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಫ್ರಾನ್ಸ್‌ನಿಂದ ಯುಎಇಗೆ

ಫ್ರಾನ್ಸ್‌ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ಶುಕ್ರವಾರವೇ ಯುಎಇಗೆ ತೆರಳಿದ್ದಾರೆ. ಇಲ್ಲಿ ಅಬುಧಾಬಿಯ ದೊರೆ ಶೇಕ್‌ ಮೊಬಮ್ಮದ್‌ ಬಿನ್‌ ಝಯೇಲ್ ಅಲ್ ನಹ್ಯಾನ್‌ ಅವರೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ವಿದೇಶದಲ್ಲಿ ನಗದುರಹಿತ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ರುಪೇ ಕಾರ್ಡ್‌ಗೂ ಚಾಲನೆ ನೀಡಲಿದ್ದಾರೆ. ಅಲ್ಲದೆ, ಯುಎಇ ಸರ್ಕಾರದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಆರ್ಡರ್‌ ಆಫ್ ಝಯೇದ್‌’ ಅನ್ನು ಪ್ರಧಾನಿ ಮೋದಿ ಸ್ವೀಕರಿಸಲಿದ್ದಾರೆ. ಇಲ್ಲಿಂದ ಮೋದಿ ಬಹರೈನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next