Advertisement

“ರಾಜ್ಯದಲ್ಲಿ ಕೊರೊನಾ ವೈರಸ್‌ ಪಾಸಿಟಿವ್‌ ವರದಿ ಬಂದಿಲ್ಲ’

09:51 AM Feb 05, 2020 | sudhir |

ಮಂಡ್ಯ: ರಾಜ್ಯದಲ್ಲಿ ಕೊರೊನಾ ವೈರಸ್‌ ಶಂಕಿತರ ರಕ್ತವನ್ನು ಪರೀಕ್ಷೆಗೊಳಪಡಿಸಿದ್ದು, ಯಾರಲ್ಲೂ ಪಾಸಿಟಿವ್‌ ವರದಿ ಬಂದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ವೈರಸ್‌ ಶಂಕಿತ 44 ಜನರ ರಕ್ತಪರೀಕ್ಷೆ ಮಾಡಿಸಿದ್ದು, ಅವರಲ್ಲಿ 29 ಜನರ ರಕ್ತ ಪರೀಕ್ಷೆಯ ವರದಿ ಬಂದಿದೆ. ಅವರಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಉಳಿದವರ ರಕ್ತ ಪರೀಕ್ಷೆ ವರದಿಯಲ್ಲೂ ಪಾಸಿಟಿವ್‌ ವರದಿ ಬಂದಿಲ್ಲವೆಂಬ ಮಾಹಿತಿ ಇದೆ. ಈ ಬಗ್ಗೆ ಇನ್ನಷ್ಟೇ ದೃಢಪಡಬೇಕಿದೆ ಎಂದು ತಿಳಿಸಿದರು.

ಕೊರೊನಾ ವೈರಸ್‌ ಬಗ್ಗೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲೂ 10 ಹಾಸಿಗೆ ಒಳಗೊಂಡಿರುವ ಪ್ರತ್ಯೇಕ ಚಿಕಿತ್ಸಾ ವಿಭಾಗವನ್ನು ತೆರೆಯಲಾಗಿದೆ. ಕೇರಳದಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳು, ವಿಮಾನ ನಿಲ್ದಾಣ, ಬಂದರುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ತಪಾಸಣೆ ನಡೆಸಲಾಗಿದೆ. ಶಂಕಿತರ ರಕ್ತ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಒಂದು ವೇಳೆ, ವೈರಸ್‌ ಸೋಂಕು ಕಂಡುಬಂದಲ್ಲಿ ರಾಜ್ಯ ಸರ್ಕಾರದ ವತಿಯಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ನಾನು ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳುವುದಿಲ್ಲ. ಪಕ್ಷದ ನಾಯಕರು ಏನು ಸೂಚಿಸುವರೋ ಅದರಂತೆ ನಡೆಯುತ್ತೇನೆ. ಸಿಎಂ ಯಡಿಯೂರಪ್ಪ ಯಾರ್ಯಾರಿಗೆ ಯಾವ ಜವಾಬ್ದಾರಿಗಳನ್ನು ಕೊಡಬೇಕು ಎಂಬುದರ ಕುರಿತಂತೆ ಈಗಾಗಲೇ ಸ್ಪಷ್ಟ ನಿರ್ಧಾರ ಕೈಗೊಂಡಿದ್ದಾರೆ. ಅವರು ಎಲ್ಲರಿಗೂ ಒಳಿತಾಗುವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ.
– ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next