ಮೈಸೂರು: ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ. ನನಗಾಗಿ ಯಾರೂ ನಾಯಕತ್ವ ಬಿಟ್ಟು ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು “ನನ್ನ ನಾಯಕತ್ವ ಹೋದರೂ ಪರವಾಗಿಲ್ಲ ಸಿದ್ದರಾಮಯ್ಯ ಬೆಳೆಯಬೇಕೆಂದು ಕಾಂಗ್ರೆಸ್‌ಗೆ ಸೇರಿಸಿಕೊಂಡೆವು” ಎಂಬ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
ನನಗೆ ಯಾರು ನಾಯಕತ್ವ ಬಿಟ್ಟು ಕೊಟ್ಟಿಲ್ಲ. ಬೆಂಗಳೂರಿನ ನನ್ನ ಸ್ನೇಹಿತ ಪೀರನ್, ಅಹ್ಮದ್ ಪಟೇಲ್ ಜೊತೆ ಮಾತುಕತೆ ನಡೆಸಿ ನನ್ನನ್ನು ಸೋನಿಯಾ ಗಾಂಧಿ ಕಾಂಗ್ರೆಸ್ ಸೇರಿಸಿಕೊಂಡರು, ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ನಾಯಕರು ಕಾರಣರಲ್ಲ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಗಲು ನಮ್ಮ ಸಮುದಾಯದವರು ಕುರಿ ಮಾರಿದ್ದಾರೆ: ಎಚ್.ವಿಶ್ವನಾಥ್
ಸಿದ್ದರಾಮಯ್ಯನವರೇ ಏಕವಚನ ಮಾತು ಕಡಿಮೆ ಮಾಡಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ವಿಶ್ವನಾಥ್ ಎಷ್ಟು ಏಕವಚನದಲ್ಲಿ ಮಾತನಾಡಿದ್ದಾನೆ ಅಂತ ತೋರಿಸಬೇಕೆ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸಬೇಕಾ ಎಂದು ಮತ್ತೆ ಏಕವಚನದಲ್ಲೇ ವಿಶ್ವನಾಥ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನನ್ನದು ಹಳ್ಳಿ ಭಾಷೆ, ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶ ಪುರ್ವಕವಾಗಿ ಏಕವಚನ ಬಳಸಲ್ಲ. ಅದು ತಾನಾಗಿಯೇ ಬರುವುದು. ನಾವು ದೇವರನ್ನೆ ಏಕವಚನದಲ್ಲಿ ಕರೆಯುತ್ತೇವೆ. ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರುವುದು ನೋಡಿದ್ದೀರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿಶ್ವನಾಥ್ ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.