Advertisement

ಸದನದಲ್ಲಿ ಕಾಂಗ್ರೆಸ್‌ ಇಲ್ಲ ಜೆಡಿಎಸ್‌ ಬೆಂಬಲ : ಕುಮಾರಸ್ವಾಮಿ ಸ್ಪಷ್ಟನೆ

10:17 AM Oct 11, 2019 | Team Udayavani |

ಬೆಂಗಳೂರು : ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಸಮಸ್ಯೆಗೆ ಪಕ್ಷದ ವತಿಯಿಂದಲೇ ಹೋರಾಟ ರೂಪಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಜೆ.ಪಿ.ಭವನದಲ್ಲಿ ಅಧಿವೇಶದಲ್ಲಿ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಮತ್ತು ಉಪಚುನಾವಣೆ, ಮಧ್ಯಂತರ ಚುನಾವಣೆ ಸಿದ್ಧತೆ ಕುರಿತು ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರೊಂದಿಗೆ ಬುಧವಾರ ಸಭೆ ನಡೆಸಿ ನಂತರ ಮಾತನಾಡಿದ ಅವರು, ಅಧಿವೇಶನದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಸಮಸ್ಯೆಗಳಿಗೆ ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ. ಜಂಟಿ ಬೆಂಬಲ ಕೊಡುವ ಅಗತ್ಯವಿಲ್ಲ. ನಾವು ಏಕಾಂಗಿ ಹೋರಾಟ ಮಾಡುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗಿಂತಲೂ ಶಕ್ತಿಯುತವಾಗಿದ್ದಾರೆ. ಅವರಿಗೆ ಹೆಚ್ಚಿನ ಸಂಖ್ಯೆಯ ಶಾಸಕರಿದ್ದಾರೆ. ನಮ್ಮ ಶಕ್ತಿ ಮೇಲೆ ಅವರಿಗೆ ಹೋರಾಟ ಮಾಡುವಂತದ್ದು ಏನಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ. ಅವರ ಕೆಲಸ ಅವರು ಮಾಡುತ್ತಾರೆ. ರಾಜ್ಯದ ಜ್ವಲಂತ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ. ಭೀಕರ ಪ್ರವಾಹ, ಮಳ ಹಾನಿ ಮತ್ತು ಬರ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ಬಿಜೆಪಿಯ ವೈಫ‌ಲ್ಯಗಳನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದು ಹೇಳಿದರು.

ಇಂದು ಜೆಡಿಎಸ್‌ ಪಾದಯಾತ್ರೆ:
ಗುರುವಾರದಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನ ನಿಮಿತ್ತ ನಮ್ಮ ಪಕ್ಷದ ಶಾಸಕರು ಸರ್ಕಾರದ ವೈಫ‌ಲ್ಯದ ವಿರುದ್ಧ ಹೋರಾಟ ರೂಪಿಸಿದ್ದಾರೆ. ನಗರದ ಮೌರ್ಯ ವೃತ್ತದಿಂದ ಸ್ವತಂತ್ರ್ಯ ಉದ್ಯಾನದವರೆಗೂ ಪಾದಯಾತ್ರೆ ಮಾಡಲಿದ್ದೇವೆ. ರಾಜ್ಯದ ಮೂಲೆ ಮೂಲೆಗಳಿಂದ ಜೆಡಿಎಸ್‌ ಕಾರ್ಯಕರ್ತರು ಬರುತ್ತಾರೆ. ಅವರ ಜತೆ ನಾವೂ ಕೂಡ ಸ್ವಾತಂತ್ರ ಉದ್ಯಾನದಲ್ಲಿ ಕೂರಲಿದ್ದೇವೆ. ಗುರುವಾರದ ಕಲಾಪ ನೋಡಿಕೊಂಡು ಮುಂದಿನ ಹೋರಾಟದ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ವಿವರ ನೀಡಿದರು.

ಚುನಾವಣೆ ಬರಬಹುದು :
ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗಿತ್ತು ಎಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ಯತ್ನಾಳ್‌ ಹೇಳಿರೋ ರೀತಿಯಲ್ಲಿ ಬಿಜೆಪಿಯಲ್ಲಿ ವಾಸ್ತವ ಇದ್ದರೆ ಚುನಾವಣೆಗೆ ಹೋಗೋದು ಸೂಕ್ತ. ನಮ್ಮ ಮೈತ್ರಿ ಸರ್ಕಾರ ಇದ್ದಾಗ ಅಷ್ಟೋ ಇಷ್ಟೋ ಕೆಲಸ ಮಾಡಿದ್ದೇವೆ. ಆದರೆ, ಯಡಿಯೂರಪ್ಪ ಅವರು ಬಂದ ನಂತರ ಯಾವುದೇ ಕೆಲಸ ಆಗುತ್ತಿಲ್ಲ ಎಂಬುದು ಯತ್ನಾಳ್‌ ಹೇಳಿಕೆಯಿಂದ ತಿಳಿಯುತ್ತಿದೆ. ಅವರ ಹೇಳಿಕೆಯ ಒಂದು ವಾಸ್ತವ ನೋಡಿದರೆ ಹೊಸದಾಗಿ ಚುನಾವಣೆಗೆ ಹೋಗೋದು ಒಳ್ಳೆಯದು. ಆಗ ಜನ ಯಾರನ್ನು ಬೇಕಾದರೂ ಕೈ ಹಿಡಿಯುತ್ತಾರೆ. ಉಪ ಚುನಾವಣೆ ಆಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಸಾರ್ವತ್ರಿಕ ಚುನಾವಣೆಯೇ ಬರಬಹುದು ಎಂದು ಹೇಳಿದರು.

Advertisement

ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾವು ಹುಚ್ಚರು ಎನ್ನುವುದಾದರೆ ಈಶ್ವರಪ್ಪನವರ ಮನಸ್ಸಲ್ಲೇ ಇಟ್ಟುಕೊಳ್ಳಲಿ. ನಾವು ಹುಚ್ಚರೇ ಆಗಿರಲಿ. ಆದರೆ, ರಾಜ್ಯದ ಜನರನ್ನು ಹುಚ್ಚರನ್ನಾಗಿ ಮಾಡಬೇಡಿ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ ಖಾಲಿ ಮನೆ ಎಂಬ ಎಚ್‌.ಸಿ.ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಪಕ್ಷದಲ್ಲಿ ಕೆಲವು ಬಾರಿ ಖಾಲಿಯಾಗುತ್ತದೆ, ಮತ್ತೆ ಕೆಲವು ಬಾರಿ ತಾನೇ ತಾನಾಗಿ ತುಂಬುತ್ತದೆ. ಮಗದೊಮ್ಮೆ ಅತಿ ಹೆಚ್ಚಾಗಿರುತ್ತದೆ. ಯಾವಾಗಲೂ ಕಾಲಚಕ್ರ ತಿರುಗುತ್ತಿರುತ್ತದೆ. ಖಾಲಿ ಇದ್ದದ್ದು ತುಂಬುತ್ತೆ, ತುಂಬಿರೋದು ಖಾಲಿಯಾಗುತ್ತದೆ ಎಂದರು.

ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸಭೆಯಲ್ಲಿ ಭಾಗಿಯಾಗಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಏನೋ ನಿರ್ಧಾರ ಮಾಡಿಕೊಳ್ಳುತ್ತಾರೆ. ಅದರ ಬಗ್ಗೆ ನಾನು ಏಕೆ ಮಾತಾಡಲಿ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next