Advertisement

ಕೈ-ಕಮಲಕ್ಕೆ ಸಿಗುತ್ತಿಲ್ಲ ಒಳ ಹೊಡೆತದ ಲೆಕ್ಕ

12:57 PM May 03, 2019 | Suhan S |
ಜಮಖಂಡಿ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಜಮಖಂಡಿ ವಿಧಾನಸಭೆ ಮತಕ್ಷೇತ್ರದ ಮತ್ತೋತ್ತರ ಲೆಕ್ಕಾಚಾರ, ಎರಡೂ ಪಕ್ಷಗಳಿಗೂ ನಿಲುಕುತ್ತಿಲ್ಲ. ಎರಡೂ ಪಕ್ಷಗಳಲ್ಲಿ ಒಳ ಹೊಡೆತದ ಲಾಭ-ನಷ್ಟದ ಲೆಕ್ಕಾಚಾರವೇ ಹೆಚ್ಚಾಗಿ ನಡೆಯುತ್ತಿದೆ.

ಹೌದು, ಕಳೆದ ಒಂದು ವರ್ಷದಲ್ಲಿ ಮೂರು ಚುನಾವಣೆ ಕಂಡ ಕ್ಷೇತ್ರವಿದು. ಕಳೆದ ಮೇನಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆದರೆ, ನವೆಂಬರ್‌ನಲ್ಲಿ ಉಪ ಚುನಾವಣೆ ಕಂಡಿತ್ತು. ಇದೀಗ ಲೋಕಸಭೆ ಚುನಾವಣೆಗೆ ಮತದಾರರು, ತಮ್ಮ ಅಂತಿಮ ನಿರ್ಧಾರದ ಮುದ್ರೆ ಒತ್ತಿದ್ದಾರೆ. ಆದರೆ, ನಮ್ಮ ಪಕ್ಷಕ್ಕೆ ಯಾವ ಭಾಗದಲ್ಲಿ ಎಷ್ಟು ಲೀಡ್‌ ಬರಲಿದೆ ಎಂಬ ಲೆಕ್ಕಾಚಾರವನ್ನು ಆಯಾ ಪಕ್ಷದವರು ಹಾಕುತ್ತಿದ್ದಾರಾದರೂ ಒಳಹೊಡೆತ ಆಗಿದ್ದರೆ ಹೇಗೆ ಎಂಬ ಆತಂಕದಲ್ಲೇ ಫಲಿತಾಂಶದವರೆಗೆ ದಿನ ದೂಡುತ್ತಿದ್ದಾರೆ.

Advertisement

ಜಾತಿವಾರು ಮತಗಳ ಲೆಕ್ಕ: ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ. 69.91ರಷ್ಟು ಮತದಾನವಾಗಿತ್ತು. ಈ ಬಾರಿ 70.57ರಷ್ಟು ಮತದಾನವಾಗಿದೆ. ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ 21,893 ಮತದಾರರು ಹೆಚ್ಚಾಗಿದ್ದು, ಮತದಾನ ಕೇವಲ ಶೇ.0.66ರಷ್ಟು ಹೆಚ್ಚಳವಾಗಿದೆ. ಅಲ್ಲದೇ ಕಳೆದ 2018ರ ವಿಧಾನಸಭೆ, 2018ರ ಉಪ ಚುನಾವಣೆಯ ಮತದಾನ ಪ್ರಮಾಣ, ಗ್ರಾಮವಾರು ಚಲಾವಣೆಯಾದ ಮತಗಳ ಪಟ್ಟಿಯೊಂದಿಗೆ ಲೆಕ್ಕ ಹಾಕುವ ಪ್ರಯತ್ನ ನಡೆದಿವೆ. ಯಾವ ಗ್ರಾಮದಲ್ಲಿ ಯಾವ ಜಾತಿಯವರು ಹೆಚ್ಚಿದ್ದಾರೆ, ಯಾವ ಸಮಾಜದವರು ಹೆಚ್ಚು ಮತದಾನದಲ್ಲಿ ತೊಡಗಿದ್ದರು ಎಂಬುದನ್ನು ಬೂತ್‌ ಮಟ್ಟದ ಏಜೆಂಟ್ರ ಮೂಲಕವೂ ಮಾಹಿತಿ (ಎರಡೂ ಪಕ್ಷದವರು) ಕಲೆ ಹಾಕಲಾಗಿದೆ. ಅದರ ಆಧಾರದ ಮೇಲೆ ನಮಗೆ ಎಷ್ಟು ಮತ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಹಲವರು ತೊಡಗಿದ್ದಾರೆ.

ಗದ್ದಿಗೌಡರಿಗೆ ಮೋದಿ ಅಲೆ-ಜಾತಿ ಬಲ: ಈ ಕ್ಷೇತ್ರದಲ್ಲಿ ಗಾಣಿಗ ಸಮಾಜ ಪ್ರಬಲವಾಗಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಬಿಜೆಪಿಯ ಬಲವೂ ಇದೆ. ನರೇಂದ್ರ ಮೋದಿ ಅವರನ್ನು ಕೂಗುವ ದೊಡ್ಡ ಯುವ ಪಡೆಯೂ ಇಲ್ಲಿದೆ. ಮೋದಿ ಅಲೆ, ಜಾತಿಯ ಬಲದೊಂದಿಗೆ ಕಳೆದ ಬಾರಿಗಿಂತ (2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25,779 ಲೀಡ್‌ ಪಡೆದಿತ್ತು) ಹೆಚ್ಚು ಲೀಡ್‌ ಪಡೆಯುತ್ತೇವೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿಯವರಿದ್ದಾರೆ. ಇಲ್ಲಿನ ಮತದಾರರು, ಲೋಕಸಭೆ ಚುನಾವಣೆಗೆ ಒಂದು ಪಕ್ಷದ ಪರವಾಗಿ ಒಲವು ತೋರಿದರೆ, ವಿಧಾನಸಭೆ ಚುನಾವಣೆಯಲ್ಲಿ ಮತ್ತೂಂದು ಪಕ್ಷಕ್ಕೆ ಹಕ್ಕು ಮುದ್ರೆಯೊತ್ತುತ್ತಾರೆ. ಹೀಗಾಗಿ ಬಿಜೆಪಿ, ಅಲೆ ಮತ್ತು ಬಲ ನಂಬಿಕೊಂಡು ಲೆಕ್ಕಾಚಾರದಲ್ಲಿ ತೊಡಗಿದೆ.

ಒಳ ಹೊಡೆತದ ಲಾಭದ ನಿರೀಕ್ಷೆ: ಆದರೆ, ಕಾಂಗ್ರೆಸ್‌ ಮಾಡುತ್ತಿರುವ ಲೆಕ್ಕಾಚಾರವೇ ಬೇರೆ. ಬಿಜೆಪಿಯ ಪ್ರಭಾವಿಗಳು, ಅವರದೇ ಪಕ್ಷಕ್ಕೆ ಒಳ ಹೊಡೆತ ನೀಡಿ, ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ತನು-ಮನ-ಧನದಿಂದ ಕೆಲಸ ಮಾಡಿದ್ದಾರೆ. ಅಲ್ಲದೇ 15 ವರ್ಷ ಸಂಸದರಾದರೂ, ಚುನಾವಣೆಗೊಮ್ಮೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಗದ್ದಿಗೌಡರನ್ನು ಈ ಬಾರಿ ಬದಲಿಸಲೇಬೇಕು ಎಂಬ ಏಕೈಕ ಗುರಿಯೊಂದಿಗೆ ಹಲವು ಪ್ರಚಾರ ಮಾಡಿದ್ದರು. ಜಮಖಂಡಿ ನಗರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪಾರಂಪರಿಕ ಮತಗಳ ಬಲವಿದ್ದು, ಕೊರತೆ ಎದುರಿಸುವ ಗ್ರಾಮೀಣ ಭಾಗದಲ್ಲಿ ಉಪ ಚುನಾವಣೆ ಮಾದರಿಯ ತಂತ್ರಗಾರಿಕೆ ಬಳಸಿಕೊಳ್ಳಲಾಗಿದೆ. ಅಲ್ಲದೇ ಜಿ.ಪಂ. ಅಧ್ಯಕ್ಷೆಯಾಗಿದ್ದಾಗ ವೀಣಾ ಅವರು, ಈ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ, ಶೌಚಾಲಯ ಜಾಗೃತಿ ಹೀಗೆ ಹಲವು ಕಾರ್ಯಕ್ರಮ ಮೂಲಕ ತಾಲೂಕಿನಲ್ಲಿ ತಮ್ಮದೇ ಆದ ಒಂದು ಪಡೆಯನ್ನೂ ರೂಪಿಸಿಕೊಂಡಿದ್ದರು. ಇದೆಲ್ಲದರ ಪರಿಣಾಮ, ಕಾಂಗ್ರೆಸ್‌ಗೆ ಹೆಚ್ಚು ಮತ ಬರುತ್ತವೆ ಎಂಬುದು ಅವರ ಲೆಕ್ಕ.

ಗುಟ್ಟು ಬಿಡದ ಜನ: ಎರಡೂ ಪಕ್ಷಗಳ ಪ್ರಮುಖರು ಏನೇ ಲೆಕ್ಕಾಚಾರ ಮಾಡಿದರೂ, ಕ್ಷೇತ್ರದ ಜನರು ಮಾತ್ರ ತಮ್ಮ ಗುಟ್ಟು ಬಿಟ್ಟುಕೊಡುತ್ತಿಲ್ಲ. ಯಾರಿಗಿ ಓಟ್ ಹಾಕೀವಿ ಅಂತ್‌ ಹ್ಯಾಂಗ್‌ ಹೇಳುದ್ರಿ. ಕೆಲ್ಸಾ ಮಾಡುವವರಿಗೆ ಎಂದು ಕೆಲವರು ಹೇಳಿದರೆ, ನಮ್ಮ ಜಾತಿಯವರು ನಿಂತಾರ್‌. ನಾವು ಓಟ್ ಹಾಕ್ಲಿಲ್ಲಂದ್ರ ಹೆಂಗ್ರಿ ಅಂದವರಿದ್ದಾರೆ. ಹೀಗಾಗಿ ಜನರ ಗುಟ್ಟು ಕೇಳುವ ಬದಲು, ಭೂತ್‌ವಾರು ಮತದಾನ ಪ್ರಮಾಣದಲ್ಲೇ ಲೆಕ್ಕ ನಡೆದಿದೆ.

Advertisement

ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ಕೊಟ್ಟರೂ ಈ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆಯ ಭಾರ ಹೊರಲು ಸ್ವತಃ ಸ್ಥಳೀಯ ಪ್ರಮುಖರೇ ಸಿದ್ಧರಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಷ್ಟೊಂದು ನೆಲೆ ಇಲ್ಲ. ಆದರೂ, 1200ರಿಂದ 2 ಸಾವಿರ ಪಾರಂಪರಿಕ ಜೆಡಿಎಸ್‌ ಮತಗಳು, ಕಾಂಗ್ರೆಸ್‌ಗೆ ಬರುವ ನಿರೀಕ್ಷೆ ಯಿದೆ.

ಒಟ್ಟಾರೆ, ಮತ್ತೋತ್ತರ ಲೆಕ್ಕಾಚಾರದಲ್ಲಿ ಒಳ ಹೊಡೆತದ ಲೆಕ್ಕವೇ ಹೆಚ್ಚು ನಡೆಯುತ್ತಿದೆ. ಅವರು, ಇವರಿಗೆ ಮಾಡಿದ್ದರೆ ನಮಗೆಷ್ಟು ನಷ್ಟ ಆಗಿರಬಹುದು ಎಂಬುದನ್ನು ಹೆಚ್ಚು ಪರಿಗಣಿಸಲಾಗುತ್ತಿದೆ. ಒಳ ಹೊಡೆತ, ಜಾತಿ ಬಲ, ಮೋದಿ ಅಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ನೋಡಲು ಸ್ವತಃ ಎಲ್ಲ ಪಕ್ಷಗಳ ನಾಯಕರೇ ಕುತೂಹಲದಿಂದ ಕಾಯುತ್ತಿದ್ದಾರೆ.

•ಮಲ್ಲೇಶ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next