ಮಡಿಕೇರಿ: ಜಾತ್ಯತೀತ ಜನತಾದಳ(ಜೆಡಿಎಸ್)ದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇಮಕಾತಿಯನ್ನು ರದ್ದುಪಡಿಸದಿದ್ದಲ್ಲಿ ಬಿ.ಎ.ಜೀವಿಜಯ ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯಾಲ ದಾಳು ಡಾ| ಮನೋಜ್ ಬೋಪಯ್ಯ, ಪಕ್ಷದ ವರಿಷ್ಠರು ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಮತ ನೀಡ ಬೇಕೆಂಬ ನಿರ್ಧಾರ ಕೈಗೊಳ್ಳಲಿರುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಜೆಡಿಎಸ್‌ಗೆ ತನ್ನದೇ ಆದ ಅಸ್ತಿತ್ವವಿಲ್ಲ. ಮಾಜಿ ಸಚಿವ ಬಿ.ಎ.ಜೀವಿಜಯ ಅವರಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್ ಜೀವಂತವಾಗಿದೆ. ಗಣೇಶ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಿಲ್ಲ ಎಂದು ಹೇಳಿದರು.
ತಮ್ಮ ಬೆಂಬಲಿಗರು ಎಂಬ ಕಾರಣಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಪಕ್ಷದ ಜಿಲ್ಲೆಯ ಪ್ರಮುಖರ ಅಭಿಪ್ರಾಯವನ್ನು ಪಡೆಯದೆ ಕೆಲವೇ ಮಂದಿಯ ಒತ್ತಾಯಕ್ಕೆ ಮಣಿದು ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಾವುದೇ ಪ್ರಮುಖರು, ಕಾರ್ಯಕರ್ತರು ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 67 ಸಾವಿರ ಮತಗಳು ಲಭ್ಯವಾಗಿದ್ದರೆ ಅದಕ್ಕೆ ಜೀವಿಜಯ ಕಾರಣ. ಜೀವಿಜಯ ಅವರು ಯಾವುದೇ ಪಕ್ಷದಲ್ಲಿದ್ದರೂ, ಸುಮಾರು 60 ಸಾವಿರಕ್ಕೂ ಅಧಿಕ ಮತದಾರರು ಅವರ ಹಿಂದಿದ್ದಾರೆ ಎಂದು ತಿಳಿಸಿದರು. ಗಣೇಶ್ ಅವರನ್ನು ನೇಮಕ ಮಾಡಿರುವ ಆಘಾತದಿಂದ ಕಾರ್ಯಕರ್ತರು ಹೊರಬರುವ ಮೊದಲೇ ಅವರು ಪತ್ರಿಕಾ ಹೇಳಿಕೆ ನೀಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಕಂಡು ಬಂದರೆ ಎಷ್ಟೇ ಹಿರಿಯರಾದರೂ ಅವರನ್ನು ಉಚ್ಛಾಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತಾಕತ್ತಿದ್ದರೆ ಜೀವಿಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಸವಾಲು ಹಾಕಿದರು.
ಪಕ್ಷದ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಎನ್.ರಾಜಾರಾವ್‌ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ ಮಾಜಿ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಜಯಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಜಾನಕಿ ವೆಂಕಟೇಶ್ ಹಾಗೂ ಪ್ರಸ್ಸಿ ಉಪಸ್ಥಿತರಿದ್ದರು.