ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ಪ್ರತಿಪಕ್ಷಗಳಿಗೆ ಬಹುದೊಡ್ಡ ಹಿನ್ನಡೆ ಆಗಿದೆ. ಮತ ಎಣಿಕೆ ಆರಂಭಿಸುವುದಕ್ಕೂ ಮುನ್ನವೇ 5 ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಮತಗಳ ಹೋಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು 22 ಪ್ರತಿಪಕ್ಷಗಳು ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಮಂಗಳವಾರವಷ್ಟೇ 22 ಪ್ರತಿಪಕ್ಷಗಳ ನಾಯಕರು ಕೇಂದ್ರ ಚುನಾವಣಾ ಆಯೋಗವನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ ಈ ಮನವಿಗೆ ಸಂಬಂಧಿಸಿ ಸಭೆ ನಡೆಸಿದ ಮೂವರು ಸದಸ್ಯರನ್ನು ಒಳಗೊಂಡ ಚುನಾವಣಾ ಆಯೋಗವು, ಮತ ಎಣಿಕೆಗೆ ಮೊದಲೇ ಮತಗಳ ಹೋಲಿಕೆ ಪ್ರಕ್ರಿಯೆ ನಡೆಸುವುದಕ್ಕೆ ನಿರಾಕರಿಸಿದೆ. ಮತ ಎಣಿಕೆ ವಿಚಾರದಲ್ಲಿ ಕೊನೇ ಕ್ಷಣದ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಸದ್ಯ ಇರುವ ನಿಯಮದಂತೆಯೇ, ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಇವಿಎಂ ಮತ್ತು ವಿವಿಪ್ಯಾಟ್ ಮತಗಳ ಹೋಲಿಕೆಯ ಕೆಲಸ ಮುಗಿಸುತ್ತೇವೆ. ಪ್ರತಿಪಕ್ಷಗಳ ಮನವಿಯನ್ನು ಒಪ್ಪಲಾಗದು ಎಂದು ಚುನಾವಣಾ ಆಯುಕ್ತರಾದ ಸುನೀಲ್ ಅರೋರಾ, ಅಶೋಕ್ ಲಾವಾಸಾ ಮತ್ತು ಸುಶೀಲ್ ಚಂದ್ರ ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷಗಳ ಮನವಿ ಏನಾಗಿತ್ತು?: ಇವಿಎಂಗಳಲ್ಲಿನ ಮತಗಳನ್ನು ಎಣಿಕೆ ಮಾಡುವ ಮೊದಲೇ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮತಗಳ ಹೋಲಿಕೆ ಪ್ರಕ್ರಿಯೆಯನ್ನು ನಡೆಸಬೇಕು. ಒಂದು ವೇಳೆ ಈ ಪ್ರಕ್ರಿಯೆ ವೇಳೆಯೇ ಲೋಪ ಕಂಡುಬಂದರೆ, ಆ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿನ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಎಣಿಸಬೇಕು ಎಂದು ಪ್ರತಿಪಕ್ಷಗಳು ಮನವಿ ಮಾಡಿದ್ದವು. ಈ ಹಿಂದೆ ವಿವಿಪ್ಯಾಟ್‌ಗಳ ಶೇ.50ರಷ್ಟು ಮತಗಳನ್ನು ಎಣಿಕೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಈಗ ಚುನಾವಣಾ ಆಯೋಗ ಕೂಡ ಪ್ರತಿಪಕ್ಷಗಳ ಕೋರಿಕೆಯನ್ನು ಮಾನ್ಯ ಮಾಡದೇ ಇರುವುದು ವಿಪಕ್ಷಗಳಿಗೆ ತೀವ್ರ ಇರುಸುಮುರುಸು ಉಂಟಾಗಿದೆ.
ಇವಿಎಂಗಳ ಬಗ್ಗೆ ಅನುಮಾನ ಮತದಾರ ರಿಗೆ ಅವಮಾನ ಮಾಡಿದಂತೆ. ಇವೇ ಇವಿಎಂ ಬಳಕೆ ಮಾಡು ವಾಗ ಯುಪಿಎ ಕೂಡ 2 ಬಾರಿ ಗೆದ್ದಿತ್ತು. ಕಳೆದ ವರ್ಷ ಮೂರು ರಾಜ್ಯ ಗೆದ್ದಿಲ್ಲವೇ?
– ಡಾ.ಕೆ. ಸುಧಾಕರ್, ಕಾಂಗ್ರೆಸ್ ಶಾಸಕ