Advertisement

ಅವಿಶ್ವಾಸ ನಿರ್ಣಯ: ಮೋದಿಗೆ 2ನೇ ಪರೀಕ್ಷೆ

01:03 AM Jul 27, 2023 | Team Udayavani |

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಮೇಲೆ ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ಪೀಕರ್‌ ಓಂ ಬಿರ್ಲಾ ಇದಕ್ಕೆ ಒಪ್ಪಿಗೆಯನ್ನೂ ನೀಡಿ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದ್ದಾರೆ. ಅಂದ ಹಾಗೆ ಇದು ನರೇಂದ್ರ ಮೋದಿ ಸರಕಾರದ ವಿರುದ್ಧ ಮಂಡನೆಯಾಗುತ್ತಿರುವ ಎರಡನೇ ಅವಿಶ್ವಾಸ ನಿರ್ಣಯ. ಅಲ್ಲದೆ ಭಾರತದ ಇತಿಹಾಸದಲ್ಲಿ ಒಟ್ಟಾರೆಯಾಗಿ 27 ಬಾರಿ ಅವಿಶ್ವಾಸ ಮಂಡನೆಯಾಗಿದೆ. ಎನ್‌ಡಿಎ ಮೊದಲ ಅವಧಿಯಲ್ಲೂ ಮಂಡನೆಯಾಗಿ ವಿಪಕ್ಷಗಳಿಗೆ ಸೋಲಾಗಿತ್ತು. ಹಾಗಾದರೆ ಏನಿದು ಅವಿಶ್ವಾಸ ನಿರ್ಣಯ? ವಿಪಕ್ಷಗಳು ಏಕೆ ಮಂಡನೆ ಮಾಡುತ್ತವೆ? ಇಲ್ಲಿದೆ ಮಾಹಿತಿ…

Advertisement

ಅವಿಶ್ವಾಸ ಗೊತ್ತುವಳಿಗೆ ಏಕಿಷ್ಟು ಮಹತ್ವ?

ಮೊದಲೇ ಹೇಳಿದ ಹಾಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳ ವಿರುದ್ಧ 27 ಬಾರಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದರೂ ಗೆದ್ದಿದ್ದು ಮಾತ್ರ ಎರಡು ಬಾರಿ. ಹೀಗಾದರೂ ವಿಪಕ್ಷಗಳು ಏಕೆ ಈ ನಿರ್ಣಯ ಮಂಡನೆ ಮಾಡುತ್ತವೆ ಎಂಬ ಸಹಜ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಬಾರಿಯೂ ಅಷ್ಟೇ. ಕೇಂದ್ರ ಸರಕಾರದ ಬಳಿ 331 ಸಂಸದರ ಬಲವಿದೆ. ಐಎನ್‌ಡಿಐಎ ಬಳಿ 144 ಸದಸ್ಯರ ಬಲವಷ್ಟೇ ಇದೆ. ಈ ಅವಿಶ್ವಾಸ ಗೊತ್ತುವಳಿಗೆ ಸೋಲಾಗುತ್ತದೆ ಎಂಬುದು ವಿಪಕ್ಷಗಳಿಗೂ ಗೊತ್ತಿದೆ.

ಆದರೂ ಮಂಡನೆ ಮಾಡುತ್ತಿರುವ ಉದ್ದೇಶದ ಹಿಂದೆ ಬೇರೆಯೇ ಕಾರಣವಿದೆ. ಅಂದರೆ ಈ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಸ್ಪೀಕರ್‌ ಅವರು, ಸರಕಾರದ ಕಾರ್ಯನಿರ್ವಹಣೆ ಬಗ್ಗೆ ಚರ್ಚೆ ಮಾಡಲು ಸಮಯ ಕೊಡುತ್ತಾರೆ. ಆಗ ವಿಪಕ್ಷಗಳ ಸದಸ್ಯರು ಸವಿವರವಾಗಿ ಲೋಕಸಭೆಯಲ್ಲಿ ಚರ್ಚೆ ನಡೆಸಬಹುದು. ಇದಕ್ಕೆ ಸರಕಾರವೂ ಪ್ರಬಲವಾಗಿ ಉತ್ತರ ಕೊಡಬೇಕು. ಈಗ ಮಣಿಪುರ ಗಲಭೆ ಬಗ್ಗೆ ಚರ್ಚೆಗೆ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಒತ್ತಾಯಿಸುತ್ತಲೇ ಇವೆ. ಆದರೆ ಕೇಂದ್ರ ಸರಕಾರ ನಿಯಮಗಳ ಲೆಕ್ಕಾಚಾರದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದೆ. ಈಗ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ, ಮಣಿಪುರ ಗಲಭೆ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ವಹಣೆ ಮಾಡಿದ ರೀತಿಯ ಬಗ್ಗೆಯೂ ಚರ್ಚೆ ಮಾಡಬಹುದು. ಹೀಗಾಗಿಯೇ ಅವಿಶ್ವಾಸ ಗೊತ್ತುವಳಿಗೆ ತನ್ನದೇ ಆದ ಪ್ರಮುಖ ಪಾತ್ರವುಂಟು.

ಏನಿದು ಅವಿಶ್ವಾಸ ನಿರ್ಣಯ?

Advertisement

ಲೋಕಸಭೆಯ ಯಾವುದೇ ಸದಸ್ಯರೊಬ್ಬರು ಸರಕಾರದ ವಿರುದ್ಧ ಮಂಡನೆ ಮಾಡುವ ನಿರ್ಣಯವಿದು. ಅಂದರೆ ಈ ಸದಸ್ಯರಿಗೆ ಲೋಕಸಭೆಯಲ್ಲಿ ಸರಕಾರಕ್ಕೆ ಸದಸ್ಯರ ಬೆಂಬಲವಿಲ್ಲ ಎಂದೆನಿಸಿದರೆ ಆಗ ಅವಿಶ್ವಾಸ ನಿರ್ಣಯ ಮಂಡನೆ ಮಾಡಬಹುದು. ಒಂದೊಮ್ಮೆ ಸ್ಪೀಕರ್‌ ಈ ನಿರ್ಣಯಕ್ಕೆ ಒಪ್ಪಿಗೆ ನೀಡಿದರೆ ಕೇಂದ್ರ ಸರಕಾರ ಸದನದಲ್ಲಿ ಬಹುಮತ ಸಾಬೀತು ಮಾಡಬೇಕಾಗುತ್ತದೆ.

ಆದರೆ ವಿಪಕ್ಷಗಳು ಮಂಡಿಸಿರುವ ಈ ಅವಿಶ್ವಾಸ ನಿರ್ಣಯಕ್ಕೆ ಕೇಂದ್ರ ಸರಕಾರ ಹೆದರಬೇಕಾದ ಯಾವುದೇ ಅಗತ್ಯವಿಲ್ಲ. ಇದಕ್ಕೆ ಕಾರಣವೂ ಇದೆ. ಲೋಕಸಭೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟ ಬಹುಮತ ಹೊಂದಿದೆ. ವಿಪಕ್ಷಗಳ ಐಎನ್‌ಡಿಐಎ 150 ಸದಸ್ಯರ ಬಲ ಮಾತ್ರ ಹೊಂದಿದ್ದು, ಸೋಲು ಖಚಿತವಾಗಿದೆ. ಆದರೂ ಅವಿಶ್ವಾಸ ನಿರ್ಣಯ ಕುರಿತಂತೆ ಲೋಕಸಭೆಯಲ್ಲಿ ಚರ್ಚೆಯಾಗುತ್ತದೆ. ಈ ಸಂದರ್ಭದಲ್ಲಿ ಸಣ್ಣ ಪುಟ್ಟ ಪಕ್ಷಗಳ ಸದಸ್ಯರಿಗೂ ಮಾತನಾಡಲು ಅವಕಾಶ ಸಿಗುತ್ತದೆ.

ಸದ್ಯ ಕಾಂಗ್ರೆಸ್‌ನ ಗೌರವ್‌ ಗೋಗೋ ಯ್‌ ಮತ್ತು ಬಿಆರ್‌ಎಸ್‌ನ ಮಮ ನಾಗೇಶ್ವರ ರಾವ್‌ ಅವರು ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿದ್ದರು.

ಅವಿಶ್ವಾಸ ನಿರ್ಣಯದ ನಿಯಮಗಳು

ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಇಚ್ಚಿಸುವ ಸದಸ್ಯರು, ಸದನ ನಡೆಯುವ ದಿನ ಬೆಳಗ್ಗೆ 10 ಗಂಟೆಗೆ ಈ ನಿರ್ಣಯವನ್ನು ಲಿಖೀತ ರೂಪದಲ್ಲಿ ಸ್ಪೀಕರ್‌ಗೆ ಸಲ್ಲಿಕೆ ಮಾಡಬೇಕು. ಇದನ್ನು ಸ್ವೀಕರ್‌ ಲೋಕಸಭೆಯಲ್ಲಿ ಓದಿ ಹೇಳುತ್ತಾರೆ. ಕನಿಷ್ಠ 50 ಮಂದಿ ಸದಸ್ಯರು ಈ ನಿರ್ಣಯಕ್ಕೆ ಬೆಂಬಲ ನೀಡಬೇಕು. ನಿರ್ಣಯ ಮಂಡಿಸಿದ 10 ದಿನಗಳ ಒಳಗಾಗಿ ಸ್ಪೀಕರ್‌ ಅವರು ಯಾ ವುದೇ ದಿನ ಬೇಕಾದರೂ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡಬಹುದು. ಇಲ್ಲದಿದ್ದರೆ ಈ ನಿರ್ಣಯ ಬಿದ್ದು ಹೋಗುತ್ತದೆ. ಜತೆಗೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ದಿನ ಕೇಂದ್ರ ಸರಕಾರ, ಬಹುಮತ ಸಾಬೀತು ಮಾಡಬೇಕು. ಸಾಬೀ ತು ಮಾಡದಿದ್ದರೆ ಸರಕಾರ ರಾಜೀನಾಮೆ ನೀಡಬೇಕಾಗುತ್ತದೆ.

ಅವಿಶ್ವಾಸ ನಿರ್ಣಯದ ಇತಿಹಾಸ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರ ಸರಕಾರದ ವಿರುದ್ಧ ಒಟ್ಟು 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಅತೀ ಹೆಚ್ಚು ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ.

2018ರಲ್ಲಿ ಮೋದಿ ವಿರುದ್ಧ ಅವಿಶ್ವಾಸ

2019ರ ಲೋಕಸಭೆ ಚುನಾವಣೆಗೆ ಇನ್ನೊಂದು ವರ್ಷವಿದೆ ಎಂದಾಗಲೂ ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆಗ ಸರಕಾರದ ಪರ ಅಂದರೆ ಅವಿಶ್ವಾಸದ ವಿರುದ್ಧ 330 ಸಂಸದರು ಹಾಗೂ ಅವಿಶ್ವಾಸದ ಪರ 135 ಸಂಸದರು ಮತ ಹಾಕಿದ್ದರು. ಹೀಗಾಗಿ ಅವಿಶ್ವಾಸ ಬಿದ್ದು ಹೋಗಿತ್ತು.

ಮೊದಲ ಅವಿಶ್ವಾಸ ನಿರ್ಣಯ

ಲೋಕಸಭೆಯಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಎದುರಿಸಿದ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರು. ಇವರ ವಿರುದ್ಧ ಆಚಾರ್ಯ ಕೃಪಲಾನಿ ಅವರು 1963ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಚೀನ ವಿರುದ್ಧದ ಯುದ್ಧ ಸೋತ ತತ್‌ಕ್ಷಣವೇ ಈ ನಿರ್ಣಯ ಮಂಡನೆಯಾಗಿತ್ತು. ಆಗ ಅವಿಶ್ವಾಸ ನಿರ್ಣಯದ ಪರವಾಗಿ 62 ಮತ್ತು ವಿರುದ್ಧ 347 ಮತಗಳು ಬಿದ್ದಿದ್ದವು.

ಇಂದಿರಾ ಗಾಂಧಿ

ಲೋಕಸಭೆ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು. ಇವರ ವಿರುದ್ಧ 15 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ವಿಶೇಷವೆಂದರೆ ಅಷ್ಟು

ಅವಿಶ್ವಾಸ ನಿರ್ಣಯಗಳನ್ನೂ ಇಂದಿರಾ ಗಾಂಧಿ ಅವರು ಸೋಲಿಸಿದ್ದರು.  ಇವರ ವಿರುದ್ಧ ಸಿಪಿಎಂ ನಾಯಕ ಜ್ಯೋತಿ ಬಸು ಅವರೇ 4 ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.

ನರಸಿಂಹ ರಾವ್‌

ಮಾಜಿ ಪ್ರಧಾನಿ ನರಸಿಂಹ ರಾವ್‌ ಅವರು ಮೂರು ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದ್ದಾರೆ.  ಮೊರಾರ್ಜಿ ದೇಸಾಯಿ, ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡು, ಜವಾಹರ್‌ ಲಾಲ್‌ ನೆಹರು, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌, ಡಾ| ಮನಮೋಹನ್‌ ಸಿಂಗ್‌  ಮತ್ತು ನರೇಂದ್ರ ಮೋದಿಯವರು ಒಂದೊಂದು ಅವಿಶ್ವಾಸ ನಿರ್ಣಯ ಎದುರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next