ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು, ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ವಾರವೇ ಕೇಂದ್ರ ಸರಕಾರ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ.
ಕಾಂಗ್ರೆಸ್ ಸಂಸದ ಗೌರವ್ ಗೋಗೊಯ್ ಮತ್ತು ಭಾರತ ರಾಷ್ಟ್ರೀಯ ಪಕ್ಷ(ಬಿಆರ್‌ಎಸ್)ದ ನಾಗೇಶ್ವರ ರಾವ್ ಅವರು ಕಲಾಪ ಆರಂಭಕ್ಕೂ ಮುನ್ನವೇ ಅವಿಶ್ವಾಸ ನಿರ್ಣಯ ಸಂಬಂಧ ಸ್ಪೀಕರ್‌ಗೆ ಲಿಖೀತ ರೂಪದಲ್ಲಿ ನೋಟಿಸ್ ನೀಡಿದ್ದರು. ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ಸ್ಪೀಕರ್ ಓಂ ಬಿರ್ಲಾ ಅವರು, ಅವಿಶ್ವಾಸ ನಿರ್ಣಯ ನೋಟಿಸ್‌ಗೆ ಒಪ್ಪಿಗೆ ನೀಡಲಾಗಿದ್ದು, ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಗೌರವ್ ಗೋಗೊಯ್ ಅವರು ರೂಲ್ 198ರ ಅಡಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಅಲ್ಲದೆ ಅವರು ಈ ಬಗ್ಗೆ ಸದನದ ಒಪ್ಪಿಗೆ ಕೋರಿದ್ದಾರೆ ಎಂದು ಓಂ ಬಿರ್ಲಾ ಹೇಳಿ, ಇದಕ್ಕೆ ಒಪ್ಪಿಗೆ ಸೂಚಿಸುವವರ ಬಗ್ಗೆ ಮಾಹಿತಿ ಕೇಳಿದರು. ಆಗ ಐಎನ್‌ಡಿಐಎ ಸದಸ್ಯರಾದ ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಎನ್‌ಸಿಯ ಫಾರೂಕ್ ಅಬ್ದುಲ್ಲ, ಡಿಎಂಕೆಯ ಟಿ.ಆರ್. ಬಾಲು, ಎನ್‌ಸಿಪಿಯ ಸುಪ್ರಿಯಾ ಸುಳೆ ಎದ್ದು ನಿಂತು ಅವಿಶ್ವಾಸ ನಿರ್ಣಯದ ಪರವಾಗಿರುವುದಾಗಿ ಹೇಳಿದರು. ಬಳಿಕ ಸ್ಪೀಕರ್ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.
ಎರಡನೇ ಬಾರಿ
ನರೇಂದ್ರ ಮೋದಿ ಸರಕಾರ ಈ ಅವಧಿಯಲ್ಲಿ ಎದುರಿಸುವ ಮೊದಲ ಅವಿಶ್ವಾಸ ನಿರ್ಣಯವಾಗಿದೆ. ಮಣಿಪುರ ಹಿಂಸಾಚಾರ ಸಹಿತ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಪಕ್ಷಗಳು ಈ ಅವಿಶ್ವಾಸ ನಿರ್ಣಯ ಮಂಡಿಸಿವೆ. ನರೇಂದ್ರ ಮೋದಿ ಸರಕಾರ ಮೊದಲ ಅವಧಿಯಲ್ಲೂ ಒಂದು ಬಾರಿ ಅವಿಶ್ವಾಸ ಮಂಡನೆ ಎದುರಿಸಿ ಗೆದ್ದಿತ್ತು.