Advertisement

ಹೋಂ ಸ್ಟೇಗಳಿಗೆ ಹಾನಿಯಾಗಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ

06:00 AM Aug 24, 2018 | Team Udayavani |

ಮಡಿಕೇರಿ: ಜಿಲ್ಲೆಯ ಹಲವೆಡೆ ಗುಡ್ಡ ಕುಸಿದು ಅಪಾರ ಪ್ರಮಾಣದ ನಷ್ಟವಾಗಿದೆ. ಮನೆ, ಜಮೀನು ನಾಶವಾಗಿದ್ದರೂ ಹೋಂಸ್ಟೇಗಳಿಗೆ ಹಾನಿಯಾಗಿರುವ ಕುರಿತು ಒಂದೇ ಒಂದು ದೂರು ಕೂಡ ಪ್ರವಾಸೋದ್ಯಮ ಇಲಾಖೆಗೆ ಬಂದಿಲ್ಲ.

Advertisement

ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿರುವ 209 ಹೋಂಸ್ಟೇಗಳಿದ್ದು, ಇನ್ನೂ 320 ಹೋಂಸ್ಟೇ  ಅರ್ಜಿ ಇತ್ಯರ್ಥವಾಗದೇ ಪ್ರವಾಸೋದ್ಯಮ ಇಲಾಖೆಯಲ್ಲೇ ಉಳಿದುಕೊಂಡಿದೆ. ಇಷ್ಟು ಮಾತ್ರವಲ್ಲದೇ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯದೇ 3500ರಿಂದ 4000 ಸಾವಿರ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ಖಚಿತಪಡಿಸಿವೆ.

ಕಳೆದ ವಾರ ನಿರಂತರ ಮಳೆ ಸುರಿದ ಪರಿಣಾಮ ಜಿಲ್ಲೆಯ ಅನೇಕ ಭಾಗದಲ್ಲಿ ಗುಡ್ಡ ಕುಸಿದು ಅಪಾರ ಹಾನಿಯಾಗಿದೆ. 10 ಮಂದಿ ಜೀವ  ಕಳೆದುಕೊಂಡಿದ್ದಾರೆ. 1118 ಮನೆ ನಾಶವಾಗಿದೆ. 4,440 ಜನರನ್ನು ರಕ್ಷಣೆ ಮಾಡಲಾಗಿದೆ. 6996 ಜನರಿಗೆ 51 ನಿರಾಶ್ರಿತರ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇಷ್ಟೇಲ್ಲ ಆದರೂ, ಒಂದೇ ಒಂದು ಹೋಂಸ್ಟೇ ನಾಶವಾಗಿರುವ ಬಗ್ಗೆ ದೂರು ಬಂದಿಲ್ಲ.

ಜಿಲ್ಲಾಡಳಿತದಿಂದ ಪರವಾನಿಗೆ ತೆಗೆದುಕೊಳ್ಳದೇ ಹೋಂಸ್ಟೇ ನಡೆಸುತ್ತಿರುವುದರಿಂದ ಹಲವರು ಹಾನಿಯಾಗಿದ್ದರೂ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಕೆಲವರು ಮನೆ ಹಾನಿಯಾಗಿದೆ ಎಂದಷ್ಟೇ ದೂರು ಕೊಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್‌ ಅವರು ವಿವರಿಸಿದರು.

ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇಗಳ ಬಗ್ಗೆ ಜಿಲ್ಲಾಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿ-ಸಂಪಾಜೆ ರಸ್ತೆಯಲ್ಲಿ ಇರುವ ಕಾವೇರಿ ಹೋಂಸ್ಟೇಗೆ ಹಾನಿಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಆದರೆ, ಅವರಿಂದ ಯಾವುದೇ ದೂರು ಬಂದಿಲ್ಲ. ಆ ಹೋಂಸ್ಟೇನಲ್ಲಿ ಅತಿಥಿಗಳು ಯಾರು ಇರಲಿಲ್ಲ. ಜಿಲ್ಲೆಯ ಯಾವುದೇ ಹೋಂಸ್ಟೇಗಳಲ್ಲಿಯೂ ಅತಿಥಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಅನುಮತಿ ಪಡೆದು ನಡೆಸುತ್ತಿರುವ ಹೋಂಸ್ಟೇಗಳಲ್ಲಿ ಯಾವುದಕ್ಕೂ ಹಾನಿಯಾಗಿಲ್ಲ ಎಂಬ ಮಾಹಿತಿ ನೀಡಿದರು.

Advertisement

ರೆಸಾರ್ಟ್‌ಗೂ ಹಾನಿಯಾಗಿಲ್ಲ:
ಪ್ರವಾಸೋದ್ಯಮ ಇಲಾಖೆಯಿಂದ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿರುವುದು 42 ರೆಸಾರ್ಟ್‌ಗಳು ಮಾತ್ರ. ಇನ್ನುಳಿದಂತೆ ಕೆಲವು ರೆಸಾರ್ಟ್‌ಗಳು ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸಭೆ ಅಥವಾ ಗ್ರಾಮಪಂಚಾಯತಿ ಅನುಮತಿ ಪಡೆದು ನಡೆಸುತ್ತಿವೆ. ಇನ್ನು ಕೆಲವು ಅನುಮತಿ ಇಲ್ಲದೇ ನಡೆಸುತ್ತಿವೆ. ರೆಸಾರ್ಟ್‌ಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿಲ್ಲ. ಆದರೆ, ಗ್ರಾಮಪಂಚಾಯತಿ, ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ರೆಸಾರ್ಟ್‌, ಹೋಟೆಲ್‌ ಲಾಡ್ಜಿಂಗ್, ಬೋರ್ಡಿಂಗ್‌ ಸೇರಿದಂತೆ 300ರಿಂದ 350ಕ್ಕೂ ಅಧಿಕ ರೆಸಾರ್ಟ್‌ಗಳಿರಬಹುದು. ಆದರೆ, ಎಷ್ಟು ರೆಸಾರ್ಟ್‌ಗಳು ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹಾಗೆಯೇ ಗುಡ್ಡ ಕುಸಿತ ಅಥವಾ ಮಳೆಯಿಂದ ಯಾವ ರೆಸಾರ್ಟ್‌ಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next