Advertisement

ಕಮರ್ಷಿಯಲ್‌, ಕಲಾತ್ಮಕ ಎಂಬ ವರ್ಗೀಕರಣ ಬೇಡ: ಪಿ.ಶೇಷಾದ್ರಿ

11:20 AM Jul 11, 2017 | |

ಬೆಂಗಳೂರು: ಚಲನಚಿತ್ರಗಳನ್ನು ಕಲಾತ್ಮಕ ಮತ್ತು ಕಮರ್ಷಿಯಲ್‌ ಸಿನಿಮಾಗಳು ಎಂದು ವರ್ಗೀಕರಣ ಮಾಡುವುದು ಸರಿಯಲ್ಲ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಸೋಮವಾರ ಆಯೋಜಿಸಿದ್ದ “ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿತ್ರರಂಗದಲ್ಲಿ ಒಳ್ಳೆಯ ಮತ್ತು ಕೆಟ್ಟ ಚಿತ್ರಗಳು ಮಾತ್ರ ಇರುತ್ತವೆ. ಆದರೆ, ಕಲಾತ್ಮಕ, ಕಮರ್ಷಿಯಲ್‌ ಚಿತ್ರಗಳು ಎಂಬ ಹಣೆಪಟ್ಟಿಯನ್ನು ಕಟ್ಟುವುದು ಬೇಡ ಎಂದರು.

Advertisement

ಕಲಾತ್ಮಕ ಚಿತ್ರಗಳು ಹೆಚ್ಚು ಜನರನ್ನು ತಲುಪುವುದಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಮ್ಮ ಕಲಾತ್ಮಕ ಚಿತ್ರಗಳು ವ್ಯವಹಾರಿಕ ಚಿತ್ರಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಜನರನ್ನು ತಲುಪುತ್ತಿವೆ. ಪ್ರಶಸ್ತಿ ಪಡೆದ ಚಿತ್ರಗಳನ್ನು ದೆಹಲಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ದೂರದರ್ಶನ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಹಾಗಾಗಿ, ಕಲಾತ್ಮಕ ಚಿತ್ರಗಳ ಪ್ರೇಕ್ಷಕರ ಸಂಖ್ಯೆಯನ್ನು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ ಎಂದರು.

“ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ನಮ್ಮ ಚಿತ್ರಗಳನ್ನು ಊರು ಊರಿಗೆ ಹೋಗಿ ತೋರಿಸುತ್ತೇವೆ. ಅಲ್ಲಿನ ವೀಕ್ಷಕರ ಜತೆಗೆ ಸಂವಾದವನ್ನೂ ನಡೆಸುತ್ತೇವೆ. ಆದರೆ, ಎಷ್ಟೇ ಒಳ್ಳೆಯ ಮುಖ್ಯವಾಹಿನಿ ಸಿನಿಮಾಗಳಿರಲಿ, ಅವುಗಳ ಕುರಿತು ಜನರ ಜತೆಗೆ ಸಂವಾದ ನಡೆಸುವುದಿಲ್ಲ. ಕಲಾತ್ಮಕ ಚಿತ್ರಗಳನ್ನು ನೋಡಿದ ಜನರು ಸಂವಾದ ನಡೆಸುತ್ತಾರೆ. ಹೀಗಾಗಿ, ಅಂತಹ ಸಿನಿಮಾಗಳಿಗೆ ವೀಕ್ಷಕರು ಇಲ್ಲ ಎಂಬುದು ಸರಿಯಲ್ಲ,’ ಎಂದು ಹೇಳಿದರು.

“ನಾನು ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾಗಳನ್ನು ಮಾಡಿಕೊಂಡು ಬಂದವನು. ಪತ್ರಕರ್ತನಾಗಿಯೂ ಇದ್ದುದರಿಂದ ಸಾಮಾಜಿಕ ಸಮಸ್ಯೆ ಬಗ್ಗೆ ತಿಳಿದು, ಆ ವಿಷಯವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನನಗೆ ಕಾಡುವ ಕಥೆ ಸಿಕ್ಕಿದರೆ ಅದನ್ನೇ ಸಿನಿಮಾ ಮಾಡುತ್ತೇನೆ. ಕಥೆ ಯಾವ ಕ್ಷಣದಲ್ಲಾದರೂ ಹುಟ್ಟಬಹುದು. ಒಂದು ಪತ್ರಿಕೆಯ ಹೆಡ್‌ಲೈನ್‌ನಲ್ಲೂ ಒಂದು ಕಥೆ ಇದೆ ಎಂಬುದು ಗೊತ್ತಾದರೆ ಮತ್ತು ಅದು ನನ್ನನ್ನು ತುಂಬಾ ಕಾಡಿದರೆ ಸಿನಿಮಾ ಮಾಡುತ್ತೇನೆ,’ ಎಂದು ತಮ್ಮ ಸಿನಿಮಾ ಪಯಣವನ್ನು ಹೇಳಿಕೊಂಡರು.

“ನಮ್ಮಲ್ಲಿ ಸಾಕಷ್ಟು ಕಥೆಗಳಿದ್ದು, ಕಥೆಗಳಿಗಾಗಿ ಬೇರೆ ಕಡೆ ಅವಲಂಬಿಸುವ ಅಗತ್ಯವಿಲ್ಲ. ಇಲ್ಲಿಯೇ ಸುತ್ತಾಡಿದರೆ, ನೂರಾರು ಕಥೆಗಳು ಹುಟ್ಟಿಕೊಳ್ಳುತ್ತವೆ,’ ಎಂದು ಶೇಶಾದ್ರಿ ಅವರು, “ನಾನು ಶಾಸ್ತ್ರೋಸ್ತ್ರವಾಗಿ ಸಿನಿಮಾ ಕಲಿತವನಲ್ಲ. ಟಿ.ಎನ್‌.ಸೀತಾರಾಮ್‌, ಕಾಸರವಳ್ಳಿ, ದತ್ತಣ್ಣ ಮುಂತಾದವರ ಜತೆ ಇದ್ದು ಕೆಲಸ ಕಲಿತವನು. ನನಗೆ ವ್ಯವಹಾರಿಕ ಸಿನಿಮಾ ಮಾಡುವ ಆಸೆ ಇತ್ತು. 1996ರ ಆಸುಪಾಸಿನಲ್ಲಿ ಮಾಲಾಶ್ರೀ ಅವರ ಕಾಲ್‌ಶೀಟ್‌ ಕೂಡ ಸಿಕ್ಕಿತ್ತು. ಆದರೆ, ನಿರ್ಮಾಪಕರು ಸಿಗಲಿಲ್ಲ. ಹಾಗೆ ನೋಡಿದರೆ, ನಿರ್ಮಾಪಕರು ಸಿಗದೇ ಇದ್ದದ್ದೇ ಒಳ್ಳೇದಾಯ್ತು. ಸಿಕ್ಕಿದ್ದರೆ, ಕಲಾತ್ಮಕ ಚಿತ್ರಗಳನ್ನು ಕೊಡಲು ಆಗುತ್ತಿರಲಿಲ್ಲ,’ ಎಂದು ಹೇಳಿದರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಮಾತನಾಡಿ, “ಗಿರೀಶ್‌ ಕಾಸರವಳ್ಳಿ, ಪಿ.ಶೇಷಾದ್ರಿ ಅವರಂತಹ ಇನ್ನೂ ಅನೇಕ ನಿರ್ದೇಶಕರು ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಶೇಷಾದ್ರಿ ಅವರನ್ನು ಈ ಹಿಂದೆಯೇ “ಬೆಳ್ಳಿಹೆಜ್ಜೆ’ಗೆ ಕರೆತರಬೇಕಿತ್ತು. ಆದರೆ, ಅವರು ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದರಿಂದ ಈಗ ಅವರನ್ನು ಕರೆತರಲು ಸಾಧ್ಯವಾಗಿದೆ. ಎಂಟು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದರೂ ಅವರಿಗೆ ಗರ್ವ ಎಂಬುದಿಲ್ಲ ಮತ್ತು ದೊಡ್ಡದಾಗಿ ಸಂಭ್ರಮಿಸಿಯೂ ಇಲ್ಲ,’ ಎಂದರು.

“ಚಲನಚಿತ್ರ ಅಕಾಡೆಮಿಯಿಂದ “ಜೇನುಗೂಡು’ ಹೆಸರಲ್ಲಿ ಕಥಾ ಬ್ಯಾಂಕ್‌ ಸ್ಥಾಪಿಸಿ, ಆ ಮೂಲಕ ನೂರು ಒಳ್ಳೆಯ ಕಥೆಗಳನ್ನು ಸಂಗ್ರಹಿಸುವ ಯೋಚನೆ ಇದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಜಾರಿಗೆ ತರುವ ಉದ್ದೇಶ ಇದೆ,’ ಎಂದು ಬಾಬು ಹೇಳಿದರು. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್‌ ಹಾಗೂ ಚಿತ್ರನಿರ್ದೇಶಕ ಟಿ.ಎನ್‌.ಸೀತಾರಾಮ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next