ಶಿಡ್ಲಘಟ್ಟ: ದೇವಸ್ಥಾನಗಳ ತವರೂರು ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ನೈರ್ಮಲ್ಯ ಹದಗೆಟ್ಟಿದ್ದು, ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.
ಸಾಹಿತ್ಯ-ಕಲೆಯ ಜೊತೆಗೆ ಅನೇಕ ದೇವಾಲಯಗಳನ್ನು ಹೊಂದಿರುವ ದೇವರಮಳ್ಳೂರು ಗ್ರಾಮ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದೇ ಗ್ರಾಮದವರು ಆದ ಬುಡಗಪ್ಪನವರ ವಿ.ಯಶೋದಮ್ಮ ಅವರು ಶಿಡ್ಲಘಟ್ಟ ತಾಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಮತ್ತು ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ ನೀಡಿ ವಾಪಸು ತೆರಳಿದ್ದಾರೆ. ಆದರೆ ಅನೇಕ ಖ್ಯಾತಿಗಳ ನಡುವೆ ನೈರ್ಮಲ್ಯ ಹದಗೆಟ್ಟಿರುವುದು ಮಾತ್ರ ಅಪಖ್ಯಾತಿಗೆ ಗುರಿಯಾಗಿದೆ.
ಪಂಚಾಯಿತಿ ಕೇಂದ್ರವಾಗಿರುವ ದೇವರಮಳ್ಳೂರು ಗ್ರಾಮದಲ್ಲಿ ಬಹುತೇಕ ಚರಂಡಿಯಲ್ಲಿ ಗಿಡಗಂಟಿಗಳು ಮತ್ತು ತ್ಯಾಜ್ಯ ತುಂಬಿ ತುಳುಕಾಡುತ್ತಿದ್ದು, ವಿಷಜಂತುಗಳು ಮತ್ತು ಸೊಳ್ಳೆಗಳಿಗೆ ಆಶ್ರಯತಾಣವಾಗಿದೆ. ಆದರೆ ಪಂಚಾಯಿತಿಯಿಂದ ಯಾವುದೇ ಸ್ವಚ್ಛತೆ ಕಾರ್ಯ ನಡೆಸಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಈಗಾಗಲೇ ಹಲವರು ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸು ಮರಳಿದ್ದಾರೆ.
ಮುಚ್ಚಿಹೋಗಿರುವ ಚರಂಡಿ: ದೇವರಮಳ್ಳೂರು ಗ್ರಾಮಕ್ಕೆ ದರ್ಶನ ಮಾಡುವ ಆರಂಭದಲ್ಲಿರುವ ಚರಂಡಿಯಲ್ಲಿ ಕಸಕಡ್ಡಿ ಮತ್ತು ತ್ಯಾಜ್ಯದಿಂದ ತುಂಬಿ ತುಳಕಾಡುತ್ತಿದೆ. ಮತ್ತೂಂದೆಡೆ ಗ್ರಾಮದಲ್ಲಿ ಒಳಗಿನ ಚರಂಡಿಗಳ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಕೆಲವೊಂದು ಚರಂಡಿಗಳು ಕೊಳಚೆ ಮತ್ತು ಕಸಕಡ್ಡಿಯಿಂದ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಕೊಳಚೆ ನೀರು ಸರಾಗವಾಗಿ ಹರಿಯದೇ ಕಲುಷಿತವಾಗಿದೆ.
ಡೀಸಿ ಭೇಟಿ ನೀಡಿದರೂ ಸುಧಾರಣೆ ಇಲ್ಲ: ಶಿಡ್ಲಘಟ್ಟ ತಾಲೂಕು ಮಾತ್ರವಲ್ಲದೇ ಜಿಲ್ಲಾದ್ಯಂತ ದೇವಸ್ಥಾನಗಳ ತವರೂರು ಎಂದು ಖ್ಯಾತಿ ಹೊಂದಿರುವ ದೇವರಮಳ್ಳೂರು ಗ್ರಾಮಕ್ಕೆ ಒಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಭೇಟಿ ನೀಡಿ ಗ್ರಾಮದಲ್ಲಿ ಸಂಚರಿಸಿ ಸ್ವತಃ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಪಿಡಿಒಗೆ ಸೂಚನೆ ನೀಡಿದರೂ ಸಹ ಸುಧಾರಣೆ ಮಾತ್ರ ಆಗಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ತುಂಬಿ ತುಳುಕಾಡುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಗ್ರಾಪಂ ಮುಂದಾಗಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಹದಗೆಟ್ಟಿರುವ ನೈರ್ಮಲ್ಯ ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
● ಎಂ.ಎ.ತಮೀಮ್ ಪಾಷ