ಜಿನೇವಾ: ಸ್ವಿಜರ್ಲೆಂಡ್‌ನ ಸ್ವಿಸ್ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ.ಗಳನ್ನು ಭಾರತೀಯರು ಇಟ್ಟಿದ್ದಾರೆ ಎಂಬ ಮಾತುಗಳ ನಡುವೆಯೇ ಸುಮಾರು 300 ಕೋಟಿ ರೂ. ಮಿಕ್ಕಿ ಇರುವ ಖಾತೆಗಳಿಗೆ ವಾರಸುದಾರರೇ ಇಲ್ಲ ಎಂಬ ಅಚ್ಚರಿಯ ಸುದ್ದಿ ಇದೀಗ ಬೆಳಕಿಗೆ ಬಂದಿದೆ.
ಇದು ವ್ಯವಹಾರ ಸ್ಥಗಿತಗೊಂಡ ಖಾತೆಯಾಗಿದ್ದು, ನ.15ರೊಳಗೆ ವಾರಸುದಾರರು ಈ ಬಗ್ಗೆ ತಿಳಿಸದೇ ಇದ್ದಲ್ಲಿ ಅಷ್ಟೂ ಹಣ ಸ್ವಿಜರ್ಲೆಂಡ್ ಸರಕಾರದ ಪಾಲಾಗಲಿದೆ. ಹೀಗೆ ವಾರಸುದಾರರೇ ಘೋಷಣೆಯಾಗದ ಖಾತೆಗಳ ಹೆಸರುಗಳಲ್ಲಿ ಭಾರತೀಯರದ್ದೂ ಇದೆ.
ನ.15ರೊಳಗೆ ವಾರಸುದಾರರು ಘೋಷಣೆಯಾಗಬೇಕಾದ ಎರಡು ಖಾತೆಗಳಿದ್ದು, ಇದು ಭಾರತೀಯರ ಹೆಸರಿನಲ್ಲಿದೆ. ಇವು ಲೈಲಾ ತಾಲೂಕ್ದಾರ್ ಮತ್ತು ಪ್ರಮಥಾ ಎನ್ ತಾಲೂಕ್ದಾರ್ ಎಂಬರವರ ಹೆಸರಿನಲ್ಲಿದೆ. ಇದರಲ್ಲಿ ಕೋಟ್ಯಂತರ ರೂ. ಹಣವಿದೆ ಎನ್ನಲಾಗುತ್ತಿದೆ.
2015ರ ಬಳಿಕ ಇಂತಹ ವ್ಯವಹಾರ ನಡೆಸದ ಖಾತೆಗಳ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡುವ ಪರಿಪಾಠವನ್ನು ಸ್ವಿಸ್ ಬ್ಯಾಂಕ್ ಶುರು ಮಾಡಿದ್ದು, ಇಂತಹ ಸುಮಾರು 10 ಖಾತೆಗಳು ಇವೆ ಎಂದು ಹೇಳಲಾಗಿದೆ.
ಬ್ರಿಟಿಷರ ಕಾಲದಲ್ಲಿ ಭಾರತೀಯರು ಇಟ್ಟಿರಬಹುದಾದ ಹಣ ಇದು ಎಂದೂ ಹೇಳಲಾಗಿದೆ. ಅಚ್ಚರಿ ಏನೆಂದರೆ ಬ್ಯಾಂಕ್ ದಾಖಲೆಗಳಲ್ಲಿ ಖಾತೆ ಹೊಂದಿವರ ಹೆಸರು ಭಾರತೀಯರದ್ದೇ ಇದ್ದರೂ, ಕಳೆದ ಆರು ವರ್ಷಗಳಲ್ಲಿ ಇಂತಹ ಖಾತೆಗಳಲ್ಲಿರುವ ಹಣ ತಮ್ಮದು ಎಂದು ಯಾವನೇ ಒಬ್ಬ ಭಾರತೀಯನು ಹೇಳಿಕೊಂಡು ಬಂದಿಲ್ಲ.
ವಾರಸುದಾರರ ಘೋಷಣೆಯಾಗಬೇಕಾದ ಕೆಲವು ಖಾತೆಯ ವಾಯಿದೆ 2020ರವರೆಗೆ ಇದೆ. ಕೆಲವೊಂದು ಖಾತೆಗಳ ವಾರಸುದಾರರು ನಾವು ಎಂದು ಪಾಕಿಸ್ಥಾನೀಯರು ಹೇಳಿಕೊಂಡಿದ್ದಾರೆ. ಜತೆಗೆ ಸ್ವಿಜರ್ಲೆಂಡ್‌ನ ಕೆಲವರು ಇದು ತಮ್ಮದು ಎಂದು ಹೇಳಿಕೊಂಡಿದ್ದಾರೆ. 2015 ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಸ್ವಿಸ್ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸದೆ ಇರುವ ಸುಮಾರು 2600 ಖಾತೆಗಳಿವೆ.