ನವದೆಹಲಿ: ದೇಶದಲ್ಲಿ ಸದ್ಯಕ್ಕಂತೂ ಮಕ್ಕಳಿಗೆ ಲಸಿಕೆ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಪ್ರಯೋಗಗಳು ನಡೆಯುತ್ತಿದ್ದರೂ, ಮಕ್ಕಳಿಗೆ ಲಸಿಕೆ ನೀಡಬೇಕೇ ಬೇಡವೇ ಎಂಬ ಕುರಿತು ಅಂತಾರಾಷ್ಟ್ರೀಯ ತಜ್ಞರ ಮಟ್ಟದಲ್ಲೇ ಇನ್ನೂ ಗೊಂದಲ ಮುಂದುವರಿದಿರುವ ಕಾರಣ, ಸದ್ಯಕ್ಕೆ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಸ್ಪಷ್ಟಪಡಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ. ಬಲರಾಂ ಭಾರ್ಗವ, “ಭಾರತದಲ್ಲಿ ಈಗಾಗಲೇ 2-18 ವಯೋಮಾನದ ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಸೆಪ್ಟೆಂಬರ್ ವೇಳೆಗೆ ಅದರ ಫಲಿತಾಂಶ ಲಭ್ಯವಾಗಲಿದೆ. ಅಮೆರಿಕದಲ್ಲಿ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಿದ್ದರೂ, ಕೆಲ ಮಕ್ಕಳಿಗೆ ಪ್ರತಿಕೂಲ ಪರಿಣಾಮ ಉಂಟಾಗಿರುವಂಥ ಪ್ರಕರಣಗಳು ವರದಿ ಯಾಗಿವೆ. ಹೀಗಾಗಿ, ಅಂತಾರಾಷ್ಟ್ರೀಯ ತಜ್ಞರ ತಂಡವು ಮಕ್ಕಳಿಗೆ ಲಸಿಕೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅಲ್ಲಿಯವರೆಗೆ ನಾವೂ ನಿರ್ಧಾರಕೈಗೊಳ್ಳಲಾಗದು ಎಂದು ತಿಳಿಸಿದ್ದಾರೆ.
ಇದೇ ವೇಳೆ, ದೇಶದಲ್ಲಿ ಗರ್ಭಿಣಿಯರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದಿದ್ದಾರೆ. ಪ್ರಸ್ತುತ ಭಾರತದಲ್ಲಿ ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಲಾಗುತ್ತಿದೆ.
ನಾಲ್ಕೂ ರೂಪಾಂತರಿಗಳಿಗೆ ಪರಿಣಾಮಕಾರಿ: 8 ರಾಜ್ಯಗಳಲ್ಲಿರುವ ಶೇ.50ರಷ್ಟು ಪ್ರಕರಣಗಳು ಡೆಲ್ಟಾ ರೂಪಾಂತರಿಯದ್ದು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ.ಎಸ್.ಕೆ.ಸಿಂಗ್ ಹೇಳಿದ್ದಾರೆ. ಆಂಧ್ರ, ದೆಹಲಿ, ಹರ್ಯಾಣ, ಕೇರಳ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಮತ್ತು ಪ. ಬಂಗಾಳದಲ್ಲಿ ಈ ರೂಪಾಂತರಿ ಹೆಚ್ಚು ವ್ಯಾಪಕವಾಗಿ ಹರಡಿದ್ದು, ಇದನ್ನುಕಳವಳಕಾರಿ ರೂಪಾಂತರಿ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಪ್ರಸ್ತುತ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿಗಳಿಗೆ ಭಾರತದಲ್ಲಿ ಲಭ್ಯವಿರುವ ಕೊವಿಶೀಲ್ಡ್ ಮತ್ತು ಕೊವ್ಯಾ ಕ್ಸಿನ್ ಲಸಿಕೆಗಳು ಪರಿಣಾಮಕಾರಿಯಾಗಿದೆ ಎಂದು ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಮಾಹಿತಿ ನೀಡಿದ್ದಾರೆ.
ಸೋಂಕು ಇಳಿಮುಖ: ಮೇ 4ರಂದು ದೇಶದ 4,531 ಜಿಲ್ಲೆಗಳಲ್ಲಿ ದಿನಕ್ಕೆ 100ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗುತ್ತಿದ್ದವು. ಈಗ 100ಕ್ಕಿಂತ ಹೆಚ್ಚು ಕೇಸುಗಳು ಪತ್ತೆಯಾಗುತ್ತಿರುವ ಜಿಲ್ಲೆಗಳ ಸಂಖ್ಯೆ 125ಕ್ಕಿಳಿದಿದೆ. ಗುಣಮುಖ ಪ್ರಮಾಣ ಶೇ.96.7ಕ್ಕೇರಿದೆ. ದೇಶದಲ್ಲಿ ಈವರೆಗೆ 30.79 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.