ಬಾಗಲಕೋಟೆ : ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಗೊಂಡರೂ ಈ ವರೆಗೆ ರೈಲ್ವೆ ನಿಲ್ದಾಣದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸದ ರೈಲ್ವೆ ಪೊಲೀಸರನ್ನು ತೀವ್ರ ತರಾಟೆಗೆ ತಗೆದುಕೊಂಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಖಡಕ್ ಎಚ್ಚರಿಕೆಯೂ ನೀಡಿದರು.
ಶನಿವಾರ ರಾತ್ರಿ ಬಾಗಲಕೋಟೆ ನಗರದ ರೈಲ್ವೆ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಅವರು, ರೈಲ್ವೆ ಪೊಲೀಸ್ ಸಬ್ ಇನ್ಸಪೆಕ್ಟರ ಸಿದ್ದಪ್ಪ ಬಾರ್ಕಿ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡರು.
ನೀವೂ ಭಾರತ ಸರ್ಕಾರದ ಅಧೀನದಲ್ಲಿ ಕೆಲ್ಸ ಮಾಡ್ತಿದ್ದೀರಿ ಎಂಬುದು ಗೊತ್ತಿದೆಯಾ, ನೀತಿ ಸಂಹಿತೆ ಜಾರಿಗೊಂಡರೂ ಚೆಕ್ ಪೋಸ್ಟ ಸ್ಥಾಪಿಸಿಲ್ಲ, ಈ ವರೆಗೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಸಭೆಗೆ ಬಂದಿಲ್ಲ. ಪ್ರತಿದಿನ ಬರುವ ರೈಲ್ವೆಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಹಾಗೂ ರೈಲು ತಪಾಸಣೆ ನಡೆಸಿ ವರದಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದಿಂದಲೇ ತಪಾಸಣೆಗೆ ಕ್ರಮ ಕೈಗೊಂಡು, ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಾದ್ಯಂತ 24ಕ್ಕೂ ಹೆಚ್ಚು ಚೆಕ್‌ಪೋಸ್ಟ ರಚಿಸಲಾಗಿದೆ. ಸಾರಿಗೆ ಸಂಸ್ಥೆಯ ಬಸ್ ಗಳು ಸೇರಿದಂತೆ ಪ್ರತಿಯೊಂದೂ ವಾಹನ ತಪಾಸಣೆ ನಡೆಸಲಾಗುತ್ತಿದೆ. ರೈಲ್ವೆ ಪೊಲೀಸರು ಮಾತ್ರ, ನಮಗೆ ಚುನಾವಣೆಯೇ ಸಂಬಂಧ ಇಲ್ಲದಂತೆ ಇದ್ದೀರಿ ಎಂದು ತರಾಟೆಗೆ ತಗೆದುಕೊಂಡರು. ಜಿ.ಪಂ. ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರಡ್ಡಿ, ತಹಶಿಲ್ದಾರರ ಪಮ್ಮಾರ ಮುಂತಾದವರು ಉಪಸ್ಥಿತರಿದ್ದರು.