ಹೊಸದಿಲ್ಲಿ : ಅಚ್ಚರಿಯ ಕ್ರಮವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಶೇ.6.50 ಹಾಲಿ ರಿಪೋ ದರವನ್ನು ಯಥಾವತ್ ಉಳಿಸಿಕೊಳ್ಳಲು ನಿರ್ಧರಿಸಿತು.
ಪರಿಣಾಮವಾಗಿ ಶೇರು ಮಾರುಕಟ್ಟೆ ಇಂದು ಸುಮಾರು 800 ಅಂಕಗಳ ನಷ್ಟಕ್ಕೆ ಗುರಿಯಾಯಿತಲ್ಲದೆ ಬ್ಯಾಂಕಿಂಗ್‌ಮತ್ತು ಹಣಕಾಸು ಕ್ಷೇತ್ರದ ಕಂಪೆನಿಗಳ ಶೇರುಗಳು ಮುಗ್ಗರಿಸಿದವು.
ರಿಪೋ ದರ ಎಂದರೆ ಬ್ಯಾಂಕುಗಳು ಆರ್‌ಬಿಐನಿಂದ ಕಾಲಕಾಲಕ್ಕೆ ಪಡೆಯುವ ಕಿರು ಅವಧಿಯ ಸಾಲದ ಮೇಲಿನ ಬಡ್ಡಿದರ ವಾಗಿರುತ್ತದೆ. ಬ್ಯಾಂಕುಗಳು ತಮ್ಮ ಕಾಲಕಾಲದ ಹಣದ ಅಗತ್ಯವನ್ನು ಪೂರೈಸಲು ಆರ್‌ಬಿಐ ನಿಂದ ಸಾಲ ಪಡೆಯುವುದು ಸಾಮಾನ್ಯವಾಗಿದೆ.
ಇದೇ ವೇಳೆ ಆರ್‌ಬಿಐ 2019ರ ಹಣಕಾಸು ಸಾಲಿನಲ್ಲಿ ಶೇ.7.4ರ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಕೂಡ ಯಥಾವತ್ ಉಳಿಸಿಕೊಂಡಿತು. ಆಗಸ್ಟ್‌ನಲ್ಲಿ ಶೇ.7.5ರ ಅಂದಾಜನ್ನು ಮಾಡಲಾಗಿತ್ತು.
ರಿಪೋ ದರವನ್ನು ಯಥಾವತ್ ಉಳಿಸಿಕೊಳ್ಳಲು ಹಣಕಾಸು ನೀತಿ ಪರಾಮರ್ಶೆ ಸಮಿತಿಯ ಆರು ಸದಸ್ಯರ ಸಭೆಯಲ್ಲಿ ಇಂದು 5 : 1 ರ ಅಂತರದಲ್ಲಿ ನಿರ್ಧರಿಸಲಾಯಿತು. ಹಾಲಿ ಹಣಕಾಸು ನೀತಿಯನ್ನು ಹೊಂದಾಣಿಕೆಯ ಬಿಗು ನೀತಿಗೆ ಬದಲಾಯಿಸಲು ಸಮಿತಿ ಸದಸ್ಯರು ನಿರ್ಧರಿಸಿದರು. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯ ಮುಂದಿನ ಸಭೆಯು ಡಿ.3ರಿಂದ 5ರ ತನಕ ನಡೆಯಲಿದೆ.