ಮುಂಬಯಿ : ಎಲ್ಲರ ಅಚ್ಚರಿಗೆ ಕಾರಣವಾಗುವ ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಹಾಲಿ ಶೇ.6.50 ರಿಪೋ ದರವನ್ನು ಯಥಾವತ್ ಉಳಿಸಿಕೊಳ್ಳಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ 792 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ 34,376.99 ಅಂಕಗಳ, ಆರು ತಿಂಗಳ ಕನಿಷ್ಠ ಮಟ್ಟದಲ್ಲಿ, ಇಂದು ಶುಕ್ರವಾರದ ವಹಿವಾಟನ್ನು ಕೊನೆಗೊಳಿಸಿತು.
ಆರ್‌ಬಿಐ ತನ್ನ ರಿಪೋ ದರವನ್ನು ಯಥಾವತ್ ಉಳಿಸಿಕೊಂಡ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಇದೇ ಮೊದಲ ಬಾರಿಗೆ 74.23 (ವಹಿವಾಟು ನಡುವಿನ ದರ) ಕುಸಿಯಿತು.
ಕಳೆದ ಎರಡು ದಿನಗಳ ನಿರಂತರ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,356.98 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 282.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,316.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,778 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಕೇವಲ 700 ಶೇರುಗಳು ಮುನ್ನಡೆ ಕಂಡವು; 1,949 ಶೇರುಗಳು ಹಿನ್ನಡೆಗೆ ಗುರಿಯಾದವು; 129 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.