ಸುವರ್ಣಸೌಧ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ರೈತರು ನೋಂದಣಿ ಮಾಡುವಾಗ ಪ್ರಮಾಣ ಪತ್ರ ಕೊಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಭತ್ತ ಬೆಳೆಗಾರರು ಆಧಾರ್ ಕಾರ್ಡ್, ಆರ್‌ಟಿಸಿ (ಪಹಣಿ), ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್, ಮೊಬೈಲ್ ನಂಬರ್ ಮಾತ್ರ ಕೊಟ್ಟು ನೋಂದಣಿ ಮಾಡಿಸಿಕೊಳ್ಳಬಹುದು. ಮೇಲ್ಕಂಡ ದಾಖಲೆ ಹೊರತುಪಡಿಸಿ ಪ್ರಮಾಣ ಪತ್ರ ಸೇರಿ ಯಾವುದೇ ಇತರ ದಾಖಲೆಗಳನ್ನು ಖರೀದಿ ಕೇಂದ್ರಗಳಲ್ಲಿ ರೈತರ ಬಳಿ ಕೇಳುವಂತಿಲ್ಲ ಎಂದು ತಿಳಿಸಿದರು.
ರಾಜ್ಯದ ಕೆಲವೆಡೆ ಭತ್ತ ಖರೀದಿಗಾಗಿ ರೈತರು ನೋಂದಣಿ ಮಾಡಿಸಲು ಬಂದಾಗ ಅನಗತ್ಯ ದಾಖಲೆ ಕೇಳಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸರ್ಕಾರ ನಿಗದಿಪಡಿಸಿದ ದಾಖಲೆ ಹೊರತುಪಡಿಸಿ ಬೇರೆ ದಾಖಲೆ ಕೇಳಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಭತ್ತ ಬೆಳೆಗಾರರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರವು ಬೆಂಬಲ ಬೆಲೆಯಡಿ ಭತ್ತ ಖರೀದಿಸಿ, ಪಡಿತರ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಗೆ ಬಳಕೆ ಮಾಡಿಕೊಳ್ಳಲಿದೆ ಎಂದರು.
ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಹೈಕೋರ್ಟ್ ಆದೇಶ ಕುರಿತು ಇಲಾಖೆಯ ಕಾರ್ಯದರ್ಶಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
● ಜಮೀರ್ ಅಹಮದ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ.