ಚಿಕ್ಕನಾಯಕನಹಳ್ಳಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವೈರಸ್ ತಡೆಗಟ್ಟಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೊಳಿಸಿದ ಕೆಲ ಆದೇಶ ಪತ್ರಗಳು ಹಾಗೂ ತಿಳಿವಳಿಕೆ ಪತ್ರಗಳು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ. ಕೋವಿಡ್ ತಡೆಗಟ್ಟಲು ತಾಲೂಕು ಆಡಳಿತ ಅನೇಕ ಮುಂಜಾಗ್ರತ ಕ್ರಮಗಳನ್ನು ಜಾರಿಗೊಳಿಸಿದ್ದು ಹಾಗೂ ಲಾಕ್‌ಡೌನ್‌ನಿಂದ ಸಾರ್ವಜನಿಕರಿಗೆ ಅನಾನುಕೂಲಗಳು ಸಂಭವಿಸಬಾರದು ಎಂದು ಕೆಲ ಮಾರ್ಗ ಸೂಚನೆಯನ್ನು ಹೊರಡಿಸಲಾಗಿತ್ತು. ಆದರೇ ತಾಲೂಕು ಆಡಳಿತದ ಮಾರ್ಗಸೂಚನೆಗೆ ಬೆಲೆ ಇಲ್ಲದಂತಾಗಿದೆ.
ನೋಟಿಸ್‌ಗಳಿಗೆ ಬೆಲೆ ಇಲ್ಲ: ತಾಲೂಕು ಆಡಳಿತ ಕೋವಿಡ್ ತಡೆಗಟ್ಟಲು ಹಗಲಿರುಳು ಶ್ರಮ ಹಾಕುತ್ತಿರುವುದರಲ್ಲಿ ಎರಡು ಮಾತಿಲ್ಲ, ಆದರೇ ಕಟ್ಟುನಿಟ್ಟಿನ ಆದೇಶಗಳಿಗೆ ತಾಲೂಕಿನಲ್ಲಿ ಬೆಲೆ
ಇಲ್ಲದಂತಾಗಿದೆ. ದಿನಸಿ ಸಾಮಗ್ರಿಗಳ ಬೆಲೆ ಅಂಗಡಿಗಳ ಮೇಲೆ ಪ್ರಕಟಣೆ ಮಾಡಬೇಕು. ನಿಗದಿ ದರಕ್ಕಿಂತ ಹೆಚ್ಚಿಗೆಯಾಗಿ ಮಾರಾಟ ಮಾಡುವಂತಿಲ್ಲ ಎಂದು ಪ್ರಕಟಣೆ ನೀಡಲಾಗಿತ್ತು. ಆದರೇ ದಿನಸಿ ಅಂಗಡಿಗಳಿಗೆ ನೋಟಿಸ್ ಪ್ರತಿಗಳನ್ನು ನೀಡಿಲ್ಲ ಹಾಗೂ ಯಾವ ಅಧಿಕಾರಿಗಳು ಒಂದು ದಿನಸಿ ಅಂಗಡಿಗಳ ತಪಾಸಣಾ ಕಾರ್ಯ ನಡೆಸಿಲ್ಲ.
ಅಕ್ರಮ ಗುಟ್ಕಾ ಹಾಗೂ ಧೂಮಪಾನ ಮಾರಾಟ ಮಾಡಬಾರದು ಎಂದು ಆದೇಶ ನೀಡಿದ್ದು, ಕೆಲ ಹಳ್ಳಿಗಳಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಬೀಡಿ, ಸಿಗರೇಟ್ ವಶಪಡಿಸಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಔಷಧಿ ಅಂಗಡಿ ಗಳಲ್ಲಿ ವೈದ್ಯರು ನೀಡಿದ ಚೀಟಿಗಳ ಆಧಾರದ ಮೇಲೆ ಮಾತ್ರ ಔಷಧಗಳನ್ನು ನೀಡಬೇಕು ಎಂದು ತಾಲೂಕು ಆಡಳಿತ ಆದೇಶ ನೀಡಿತ್ತು. ಆದರೆ ಇದು ಯಾವ ಔಷಧ ಅಂಗಡಿಗಳಲ್ಲಿ ಅನುಷ್ಠಾನವಾಗಿಲ್ಲ. ಸರ್ಕಾರ ಬೇಕರಿಗಳನ್ನು ಲಾಕ್‌ಡೌನ್ ಸಮಯದಲ್ಲಿ ತೆರೆಯಲು ಆವಕಾಶ ನೀಡಿದ್ದು, ಕೆಲ ಮಾರ್ಗ ಸೂಚನೆಯನ್ನು ಸಹ ನೀಡಿದೆ ಅದರೇ ತಾಲೂಕಿನಲ್ಲಿನ ಬೇಕರಿಗಳಲ್ಲಿ ಯಾವ ಯಾವ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ ಎಷ್ಟು ದಿನ ಅವುಗಳನ್ನು ಇರಿಸಲಾಗಿರುತ್ತದೆ ಎಂಬ ತಪಾಸನೆ ಕಾರ್ಯ ನಡೆದಿಲ್ಲ. ತಾಲೂಕು ಆಡಳಿತ ಜಾರಿ ಗೊಳಿಸಿದ್ದ ಎಲ್ಲಾ ಆದೇಶಗಳು ಜನಪರವಾಗಿದ್ದು, ಆದರೆ ಆದೇಶಗಳು ಹಲ್ಲು ಕಿತ್ತ ಹಾವಿನಂತಾಗಿವೆ.