ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿರುವಂತೆಯೇ ದೀರ್ಘ ಪ್ರಯಾಣಕ್ಕೆ ಪ್ರಯಾಣಿಕರು ರೈಲಿನ ಬದಲಾಗಿ ವಿಮಾನವನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಹೀಗಾಗಿ ಈ ರೂಟ್‌ಗಳಿಗೆ ಬುಲೆಟ್ ಟ್ರೇನ್ ಸಾಧುವಲ್ಲ ಎಂದು ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೊರೇಷನ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಚೀನಾದಲ್ಲಿ 27 ಸಾವಿರ ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹೈಸ್ಪೀಡ್ ರೈಲು ನೆಟ್‌ವರ್ಕ್ ಅನ್ನು ಅಧ್ಯಯನ ನಡೆಸಿರುವ ಕಾರ್ಪೊರೇಷನ್ ಅಧಿಕಾರಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಕಡಿಮೆ ದೂರದ ನಗರಗಳು ಮತ್ತು ಪಟ್ಟಣಗಳಿಗೆ ಬುಲೆಟ್ ಟ್ರೇನ್ ಅನ್ನು ಅಳವಡಿಸುವುದು ಆರ್ಥಿಕವಾಗಿಯೂ ಪೂರಕ. ದೂರ ಪ್ರಯಾಣದ ಸ್ಥಳಗಳಿಗೆ ವಿಮಾನದಷ್ಟೇ ದರ ವಿಧಿಸುವಾಗ ಪ್ರಯಾಣಿಕರು ರೈಲಿಗಿಂತ ವಿಮಾನವನ್ನೇ ಆಯ್ಕೆ ಮಾಡುವುದು ಖಚಿತ. ಚೀನಾದಲ್ಲಿ ದೀರ್ಘ ಪ್ರಯಾಣಕ್ಕಾಗಿ ಬುಲೆಟ್ ಟ್ರೇನ್‌ಗಳು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.