ಕುಮಟಾ: ತಾಲೂಕಿನ ಹೆಗಡೆಯಿಂದ ಮಿರ್ಜಾನದ ತಾರಿಬಾಗಿಲಿಗೆ ಸಂಪರ್ಕ ಕಲ್ಪಿಸುವ ಅಘನಾಶಿನಿ ನದಿಗೆ ಈವರೆಗೂ ಸೇತುವೆ ಭಾಗ್ಯ ಒದಗಿ ಬಂದಿಲ್ಲ. ಕುಮಟಾದಿಂದ ಹೆಗಡೆ ಮಾರ್ಗವಾಗಿ ಮಿರ್ಜಾನ್ ಗೆ ತಲುಪಲು ನಾಲ್ಕೈದು ಕಿ.ಮೀ ಸಂಚಾರ ಕಡಿಮೆ ಮಾಡಬಲ್ಲ ಸರಳ ಮಾರ್ಗವಿದ್ದರೂ, ಸೇತುವೆ ಕೊರತೆಯಿಂದಾಗಿ ಸ್ಥಳೀಯ ವಾಹನಿಗರು ಕಡಿಮೆ ವೆಚ್ಚದಲ್ಲಿ ಮಿರ್ಜಾನ ತಲುಪುವ ಅವಕಾಶದಿಂದ ವಂಚಿತರಾಗಿದ್ದಾರೆ.
ದೊರಕದ ಕಡಿಮೆ ದರದ ಭಾಗ್ಯ: ಸರಿ ಸುಮಾರು 40 ವರ್ಷಗಳ ಹಿಂದೆ ಬಹುತೇಕ ವಾಹನಗಳು ಜಂಗಲ್ ಮೂಲಕ ನದಿ ದಾಟಿ ಹೆಗಡೆ ಮಾರ್ಗವಾಗಿಯೇ ಮಿರ್ಜಾನ ತಾರಿಬಾಗಿಲು ಹಾಗೂ ಗೋಕರ್ಣ ಕಾರವಾರ ಕಡೆ ಪ್ರಯಾಣ ಬೆಳೆಸುತ್ತಿದ್ದರು. ಕ್ರಮೇಣ ಮಿರ್ಜಾನ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣವಾದ ಮೇಲೆ ಹೆಗಡೆ ಮಾರ್ಗವಾಗಿ ವಾಹನ ಓಡಾಟ ಸಂಪೂರ್ಣ ಸ್ಥಗಿತಗೊಂಡು ಹೆದ್ದಾರಿ ಮೂಲಕವೇ ಚಲಿಸಲಾರಂಭಿಸಿತು. ಅಂದಿನಿಂದಲೇ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸುವ ಭಾಗ್ಯ ಕೈ ತಪ್ಪಿತು.
ಪ್ರಯಾಣ ಅಂತರ: ಮಿರ್ಜಾನ ತಾರಿಬಾಗಿಲಿನಿಂದ ಅಘನಾಶಿನಿ ನದಿ ದಾಟಿದರೆ ಹೆಗಡೆಯಿಂದ ಕುಮಟಾ ಪಟ್ಟಣಕ್ಕೆ ಕ್ರಮಿಸಲು ಕೇವಲ 4 ಕಿ.ಮೀಗಳ ಅಂತರವಿದೆ. ಅದೇ ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ವಾಹನ ಮೂಲಕ ಚಲಿಸಲು 12 ಕಿ.ಮೀಗಳಷ್ಟು ಸಂಚರಿಸಬೇಕು. ಬಸ್ಸಲ್ಲಿ ಓಡಾಡುವ ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಮಾರ್ಗದಿಂದ ಬಡ ಪ್ರಯಾಣಿಕರಿಗೂ ತುಂಬಾ ಅನುಕೂಲ. ಅಲ್ಲದೇ ಸ್ವಂತ ವಾಹನ ಹೊಂದಿದವರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಹೆಚ್ಚಿರುವುದರಿಂದ ಹೆಗಡೆ ಮಾರ್ಗವಾಗಿ ಕುಮಟಾ ಪಟ್ಟಣಕ್ಕೆ ವಾಹನ ಓಡಿಸುವುದು ಸುಲಭ ಹಾಗೂ ಸುರಕ್ಷಿತವಾಗಿದೆ.
ಇಂಧನ ಉಳಿತಾಯ: ಕೇಂದ್ರ ಸರಕಾರ ಹೊರ ದೇಶದಿಂದ ದುಬಾರಿ ಬೆಲೆಯಲ್ಲಿ ಇಂಧನ ಆಮದು ಮಾಡಿಕೊಳ್ಳುತ್ತದೆ. ಪ್ರತಿದಿನ ಸಾವಿರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕವೇ ಹಾದು ಹೋಗುವುದರಿಂದ ಅಪಾರ ಇಂಧನವ್ಯಯವಾಗುತ್ತದೆ. ಅದೇ ಹೆಗಡೆ ಮಾರ್ಗವಾಗಿ ವಾಹನಗಳು ಕ್ರಮಿಸಿದರೆ ಪ್ರತಿದಿನ ಲಕ್ಷಾಂತರ ರೂ. ಇಂಧನ ಉಳಿತಾಯವಾಗುತ್ತದೆ. ಇದರಿಂದ ಹೊರದೇಶದಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದ ಸರಕಾರಕ್ಕೆ ಸಾಕಷ್ಟು ಲಾಭವಾಗಬಲ್ಲದು.
ದೋಣಿಯಲ್ಲಿ ಬೈಕ್ ಪ್ರಯಾಣಿಕರ ಸಾಗಾಟ: ತಾರಿಬಾಗಿಲಿನಿಂದ ಯಂತ್ರಚಾಲಿತ ಡಿಂಗಿ ದೋಣಿಯಲ್ಲಿ ಬೈಕ್, ಮಾರುತಿ ಕಾರು, ರಿಕ್ಷಾದಂತಹ ಹಗುರ ವಾಹನದ ಜೊತೆ ಪ್ರಯಾಣಿಕರನ್ನು ತುಂಬಿ ಹೆಗಡೆ ದಡ ತಲುಪಿಸಲಾಗುತ್ತದೆ. ತಾರಿಬಾಗಿಲಿನಿಂದ ಹೆಗಡೆ ಹೋಗುವವರು ಹೆಗಡೆಯಿಂದ ತಾರಿಬಾಗಿಲಿಗೆ ಬರುವ ಪ್ರಯಾಣಿಕರಿಗೆ ಒಂದೇ ದೋಣಿ ಇರುವುದರಿಂದ ದೋಣಿ ಬರುವವರೆಗೂ ಕಾಯಬೇಕಾದ ಅನಿವಾರ್ಯತೆ ಇದೆ.
ಸೇತುವೆ ಅಗತ್ಯತೆ: ಈ ನಿಟ್ಟಿನಲ್ಲಿ ತಾರಿಬಾಗಿಲಿನಿಂದ ಹೆಗಡೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಘನಾಶಿನಿ ನದಿಗೆ ಸುಸಜ್ಜಿತ ಸೇತುವೆ ಅಗತ್ಯತೆ ತುಂಬಾ ಇದೆ. ಅಘನಾಶಿನಿ ನದಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಕಳೆದ 40 ವರ್ಷಗಳಿಂದಲೂ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಇದ್ದಾರೆ. ಮಾಜಿ ಶಾಸಕ ದಿ| ಮೋಹನ ಶೆಟ್ಟರು ಅಘನಾಶಿನಿ ನದಿಗೆ ಸೇತುವೆಯ ಕಟ್ಟುವ ಪ್ರಯತ್ನ ನಡೆಸಿದ್ದರು. ಆದರೆ ಅದು ಫಲಪ್ರದವಾಗಲಿಲ್ಲ.
ಆಯ್ಕೆಯಾದ ಜನಪ್ರತಿನಿಧಿಗಳಾದರೂ ಅಘನಾಶಿನಿ ನದಿಗೆ ಸೇತುವೆ ನಿರ್ಮಿಸುವ ಇಚ್ಛಾ ಶಕ್ತಿ ತೋರದ್ದರಿಂದ ಜನರ ಸೇತುವೆ ಕನಸು ನನಸಾಗದೇ ಉಳಿದು ಕೊಂಡಿದೆ. ಅಘನಾಶಿನಿ ನದಿಗೆ ಸೇತುವೆ ಸಾಧ್ಯವಾಗದಿದ್ದರೆ ತೂಗು ಸೇತುವೆಯಾದರೂ ನಿರ್ಮಿಸಿದಲಿ ಅಪಾರ ಜನರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಈಗಲಾದರೂ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ವಹಿಸಿ ಜನರ ಆಶಯ ಈಡೇರಿಸಲು ಮುಂದಾಗಬೇಕಿದೆ.