ಹೊಸದಿಲ್ಲಿ : 2020ರ ಎಪ್ರಿಲ್ 1ರ ಜಾರಿಗೆ ಬರುವಂತೆ ದೇಶದಲ್ಲಿ ‘ಭಾರತ್ ಸ್ಟೇಜ್ 4’ ಮೋಟಾರು ವಾಹನಗಳನ್ನು ಮಾರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಬುಧವಾರ ಹೇಳಿದೆ.
ಮೋಟಾರು ವಾಹನಗಳು ಹೊರಸೂಸುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರವು ಸ್ಥಾಪಿಸಿದ್ದ ಗುಣಮಟ್ಟ ವ್ಯವಸ್ಥೆಯ ಭಾಗವಾಗಿ ಭಾರತ್ ಸ್ಟೇಜ್ ಎಮಿಶನ್ ಸ್ಟಾಂಡರ್ಡ್ ಜಾರಿಗೆ ತರಲಾಗಿದೆ.
ಭಾರತ್ ಸ್ಟೇಜ್ 6 (ಅಥವಾ ಬಿಎಸ್ 6) ಎಮಿಶನ್ ನಿಯಮವು 2020ರ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಜಸ್ಟಿಸ್ ಮದನ್ ಬಿ ಲೋಕೂರ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಪೀಠ ಇಂದು ಬುಧವಾರ “2020ರ ಎಪ್ರಿಲ್ 1ರಿಂದ ದೇಶಾದ್ಯಂತ ಕೇವಲ ಬಿಎಸ್ 6 ಎಮಿಶನ್ ನಾರ್ಮ್ ಗೆ ಬದ್ಧವಿರುವ ಮೋಟಾರು ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು’ ಎಂದು ಸ್ಪಷ್ಟಪಡಿಸಿದೆ.
Related Articles
ಶುದ್ಧ ಇಂಧನದೆಡೆಗೆ ಸಾಗುವ ಅಗತ್ಯವನ್ನು ಪರಿಗಣಿಸಿ ಈ ನಿರ್ಧಾರ ತಳೆಯಲಾಗಿದೆ ಎಂದು ಪೀಠ ಹೇಳಿತು.
ಬಿಎಸ್ 4 ಗುಣಮಟ್ಟದ ಮೋಟಾರು ವಾಹನಗಳ ಮಾರಾಟವನ್ನು 2017ರ ಎಪ್ರಿಲ್‌ನಿಂದ ಕಡ್ಡಾಯ ಮಾಡಲಾಗಿತ್ತು.
2016ರಲ್ಲಿ ಕೇಂದ್ರ ಸರಕಾರ “ಬಿಎಸ್ 5′ ಗುಣಮಟ್ಟವನ್ನು ಕೈಬಿಡಲಾಗುವುದು ಮತ್ತು 2020ರಲ್ಲಿ ನೇರವಾಗಿ ಬಿಎಸ್ 6 ಗುಣಮಟ್ಟದ ಮೋಟಾರು ವಾಹನ ಬಳಕೆ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಿತ್ತು.