ಮುಂಬಯಿ: ಐಪಿಎಲ್ ಬೆಟ್ಟಿಂಗ್ ಆರೋಪದಲ್ಲಿ ಬಂಧಿ ಸಲ್ಪಟ್ಟ ಭಾರತದ ವನಿತಾ ಕ್ರಿಕೆಟ್ ತಂಡದ ಮಾಜಿ ಕೋಚ್ ತುಷಾರ್ ಅರೋಠೆ, ತಾನು ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲಿಲ್ಲ ಎಂದಿದ್ದಾರೆ.
“ಕ್ರಿಕೆಟೇ ನನ್ನ ಬದುಕು. ನಾನು ಇಂದು ಏನೇ ಆಗಿದ್ದರೂ ಅದು ಕ್ರಿಕೆಟಿನಿಂದ. ಇಂಥ ಚಟುವಟಿಕೆಗಳಲ್ಲಿ ನಾನೆಂದಿಗೂ ಭಾಗಿಯಾಗುವುದಿಲ್ಲ. ನಾನು ಇಲ್ಲಿಯವರೆಗೆ ಮೋಸ ಮಾಡಿಲ್ಲ. ಬೆಟ್ಟಿಂಗ್ ಮಾಡುವುದು ಬಿಡಿ, ಅದರ ಬಗ್ಗೆ ಯೋಚನೆಯೂ ಮಾಡಿಲ್ಲ’ ಎಂದಿದ್ದಾರೆ.
ಬರೋಡಾದ 52 ವರ್ಷದ ತುಷಾರ್ ಅರೋಠೆ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದರು. ಬಳಿಕ ಅವರಿಗೆ ಜಾಮೀನು ದೊರಕಿತ್ತು.
ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಅರೋಠೆ ಅವರನ್ನು ವಡೋದರ ಪೊಲೀಸರು ಬಂಧಿ ಸಿದ್ದರು. ಖಚಿತ ಮಾಹಿತಿಯ ಮೇಲೆ ಹೊಟೇಲ್‌ಗೆ ದಾಳಿ ನಡೆಸಿದ ಪೊಲೀಸರು ತುಷಾರ್ ಸಹಿತ 18 ಮಂದಿನ್ನು ಬಂಧಿಸಿದ್ದರು. ಮೊಹಾ ಲಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದ ಮೇಲೆ ಇವರು ಬೆಟ್ಟಿಂಗ್ ನಡೆಸಿದ್ದರು ಎಂಬುದಾಗಿ ವಡೋದರ ಕ್ರೈಂ ಬ್ರಾಂಚ್ ಅಧಿಕಾರಿ ಜಯದೀಪ್‌ಸಿನ್ಹಾ ಜಡೇಜ ಹೇಳಿದ್ದರು.
2017-18ರಲ್ಲಿ ತುಷಾರ್ ಅರೋಠೆ ವನಿತಾ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 2017ರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ವಿವಾದದಿಂದಾಗಿಯೇ ಅವರು ಕೋಚಿಂಗ್ ಹುದ್ದೆಯಿಂದ ಕೆಳಗಿಳಿದಿದ್ದರು.