ಲಂಡನ್:ಮಾರಣಾಂತಿಕ ಕೋವಿಡ್ 19 ವೈರಸ್ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಎಷ್ಟು ಪರಿಣಾಮಕಾರಿಯಾಗಿ ರೋಗಿಗೆ ನೆರವಾಗಬಲ್ಲದು ಎಂಬ ಬಗ್ಗೆ ನಡೆಯುತ್ತಿದ್ದ ಅಧ್ಯಯನದ ಬಗ್ಗೆ ಇದೀಗ ನಿರಾಸೆಯ ಫಲಿತಾಂಶ ಹೊರಬಿದ್ದಿದೆ ಎಂದು ಆಕ್ಸ್ ಫರ್ಡ್ ತಿಳಿಸಿದೆ.
ಹೌದು ಮಲೇರಿಯಾ ಚಿಕಿತ್ಸೆಗೆ ಬಳಸಲಾಗುವ ಎರಡು ಔಷಧಗಳು ಕೋವಿಡ್ 19 ಅನ್ನು ತಡೆಗಟ್ಟಬಲ್ಲದೇ ಎಂಬುದನ್ನು ತಿಳಿಯುವುದಕ್ಕಾಗಿ ಬ್ರೈಟನ್ ಮತ್ತು ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಆರಂಭವಾಗಿತ್ತು. ಆದರೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ (ಎಚ್ ಸಿಕ್ಯೂ) ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಆಕ್ಸ್ ಫರ್ಡ್ ಯೂನಿರ್ವಸಿಟಿ ಈ ಕುರಿತ ಅಧ್ಯಯನವನ್ನು ನಿಲ್ಲಿಸಿಬಿಟ್ಟಿದೆ ಎಂದು ವರದಿ ಹೇಳಿದೆ.
ಹೈಡ್ರೋಕ್ಸಿಕ್ಲೋರೋಕ್ವಿನ್ ನಿಂದ ಯಾವುದೇ ಲಾಭವಿಲ್ಲ ಎಂಬುದು ಪತ್ತೆಯಾಗಿದೆ. ಆದರೆ ಭಾರತ ಪ್ರೊಪೈಲ್ಯಾಕ್ಸಿಸ್ ಮತ್ತು ಕೋವಿಡ್ 19 ಸೋಂಕಿತ ರೋಗಿಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧವನ್ನು ಬಳಸುವುದನ್ನು ಮುಂದುವರಿಸಿದೆ ಎಂದು ತಿಳಿಸಿದೆ.
ಆಕ್ಸ್ ಫರ್ಡ್ ಯೂನಿರ್ವಸಿಟಿಯ ಪ್ರೊ.ಪೀಟರ್ ಹೋರ್ಬೈ ಹೇಳಿಕೆ ಪ್ರಕಾರ, ಹೈಡ್ರೋಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೋಕ್ವಿನ್ ಬಹಳಷ್ಟು ಭರವಸೆಯನ್ನು ಹುಟ್ಟಿಸಿತ್ತು. ಈ ನಿಟ್ಟಿನಲ್ಲಿ ಕೋವಿಡ್ 19 ರೋಗಿಗಳಿಗೆ ಹೆಚ್ಚಾಗಿ ಈ ಮಾತ್ರೆಗಳನ್ನು ಚಿಕಿತ್ಸೆ ವೇಳೆ ಉಪಯೋಗಿಸಲಾಗಿತ್ತು. ಆದರೆ ರೋಗಿ ಚೇತರಿಕೆಗೊಳ್ಳುವ ಪರೀಕ್ಷೆಯ ಟ್ರಯಲ್ ನಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ 19 ರೋಗಿಗೆ ಪರಿಣಾಮಕಾರಿ ಚಿಕಿತ್ಸೆ
ಅಲ್ಲ ಎಂಬುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಎಚ್ ಸಿಕ್ಯೂಗೆ ಸಂಬಂಧಿಸಿದ ಅಧ್ಯಯನ ನಿಲ್ಲಿಸಿರುವುದಾಗಿ ಹೇಳಿದರು.
ಈ ಔಷಧಿಗಳು ಜ್ವರ ಮತ್ತು ಉರಿಯೂತವನ್ನು ಕಡಿಮೆಗೊಳಿಬಲ್ಲುವು ಮತ್ತು ಮಲೇರಿಯ ತಡೆಗಟ್ಟುವಲ್ಲಿ ಹಾಗೂ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತಿವೆ. ಕೋವಿಡ್ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಲಾಭದಾಯಕವಾಗಬಲ್ಲುದೆಂದು ಟ್ರಂಪ್ ಹೇಳಿದ ಬಳಿಕ ವಿಶ್ವದ ಗಮನ ಅದರತ್ತ ಸೆಳೆದಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯೆಂದು ಸಾಬೀತಾಗಿಲ್ಲ ಮತ್ತು ಅದರ ಸೇವನೆಯಿಂದ ಹೃದಯಕ್ಕೆ ಅಪಾಯವುಂಟಾಗಬಹುದೆಂದು ಎಚ್ಚರಿಸಿತ್ತು.