Advertisement

ಬಿಡದಿಯ ವಿವಿಧ ಬಡಾವಣೆಯಲ್ಲಿ ಸೌಕರ್ಯವೇ ಇಲ್ಲ

09:45 AM May 07, 2019 | Suhan S |

ರಾಮನಗರ: ಬಿಡದಿ, ರಾಮನಗರ ಜಿಲ್ಲೆಯ ಕೈಗಾರಿಕಾ ನಗರವಾಗಿ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರ. ಅಭಿವೃದ್ಧಿಗಾಗಿ ಗ್ರಾಪಂ ನಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇಲ್ಲಿನ ಸಮಸ್ಯೆಗಳಿಗೆ ಮಿತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯ ಹಿಂಭಾಗ ಇರುವ ಹೊಂಬಯ್ಯ ಮತ್ತು ಬಸವರಾಜ ಲೇ ಔಟ್ ಪುರಸಭೆಯ ನಿರ್ವಹಣೆಯಿಂದ ವಂಚಿತವಾಗಿದೆ.

Advertisement

ಸಮಸ್ಯೆಗಳಿಗೆ ಸ್ಪಲ್ಪವೂ ಮುಕ್ತಿ ಸಿಕ್ಕಿಲ್ಲ: ಸುಮಾರು 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ಬಡಾವಣೆಳು ರಚನೆಯಾಗಿದೆ. 60ಕ್ಕೂ ಹೆಚ್ಚು ಮನೆಗಳಿವೆ. ಸಧ್ಯ ಪುರಸಭೆಯ ವಾರ್ಡ್‌ 15ರ ವ್ಯಾಪ್ತಿಯಲ್ಲಿದೆ. ರಸ್ತೆ, ಚರಂಡಿ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಸ ವಿಲೇವಾರಿಯಂತೂ ಆಗೋದೆ ಇಲ್ಲ. ನೀರು ಸರಬರಾಜು, ವಿದ್ಯುತ್‌ ಸರಬರಾಜು ಸಮಸ್ಯೆಯೂ ಇದೆ. 2 ದಶಕಗಳ ಕಾಲ ಸಮಸ್ಯೆಗಳ ಸರಮಾಲೆಯಲ್ಲಿ ಹೈರಾಣಾಗಿರುವ ಇಲ್ಲಿ ವಾಸಿಸುವ ಕುಟುಂಬಗಳು ಬಿಡದಿ ಪುರಸಭೆಯಾದ ನಂತರ ಅಭಿವೃದ್ಧಿಯಾಗಬಹುದು ಎಂದು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿದೆ. ಪುರಸಭೆ ರಚನೆಯಾಗಿ 2 ವರ್ಷ ಕಳೆದರು ಇಲ್ಲಿನ ಸಮಸ್ಯೆಗಳಿಗೆ ಸ್ಪಲ್ಪವೂ ಮುಕ್ತಿ ಸಿಕ್ಕಿಲ್ಲ. ಚುನಾಯಿತ ಪ್ರತಿನಿಧಿಗಳು ಕಣ್ಣೊರೆಸುವ ಮತ್ತು ಮೂಗಿಗೆ ತುಪ್ಪ ಸವರುವ ಮಾತುಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಅಧಿಕಾರಿಗಳ ಬಗ್ಗೆ ಹೇಳ್ಳೋದೆ ಬೇಡ ಅಂತಾರೆ ಇಲ್ಲಿಯ ನಿವಾಸಿಗಳು.

ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳು: ಬಸವರಾಜ ಬಡಾವಣೆ ಮತ್ತು ಹೊಂಬಯ್ಯ ಬಡಾವಣೆಯಲ್ಲಿ ಕೆಲ ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳಿವೆ. ಇದು ಬೆಸ್ಕಾಂ ಮತ್ತು ಪುರಸಭೆಯ ಇಂಜಿನಿಯರ್‌ಗಳ ನಡುವಿನ ಸಂಪರ್ಕದ ಕೊರತೆ ತೋರಿಸುತ್ತದೆ. ನೀರು ಪೂರೈಕೆ ವ್ಯವಸ್ಥೆಯ ಭಾಗವಾಗಿರುವ ಕೊಳವೆ ಬಾವಿ ಕೂಡ ರಸ್ತೆ ಮಧ್ಯೆ ಇದೆ. ಕೊಳವೆ ಬಾವಿಗೆ ಅಳವಿಡಿಸಿರುವ ಸ್ವಿಚ್ಚ್ ಬೋರ್ಡ್‌, ಇದಕ್ಕೆ ಕಲ್ಪಿಸಿರುವ ವಿದ್ಯುತ್‌ ಸಂಪರ್ಕ ಸುಸ್ಥಿತಿಯಲ್ಲಿಲ್ಲದೆ ಅಪಾಯವೊಡ್ಡುತ್ತಿದೆ.

ಒಳಚರಂಡಿ ವ್ಯವಸ್ಥೆ ಇಲ್ಲಿಲ್ಲ: ಹೊಂಬಯ್ಯ ಮತ್ತು ಬಸವರಾಜು ಲೇಔಟ್‌ಗಳು ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿವೆ. ಚರಂಡಿಗಳ ಮೂಲಕವೇ ಎಲ್ಲಾ ಕಲ್ಷ್ಮಶಗಳು ಸಾಗುತ್ತಿವೆ. ಚರಂಡಿಗಳ ಮೇಲೆ ಸ್ಲಾಬ್‌ಗಳನ್ನು ಮುಚ್ಚದೆ ಇರುವುದರಿಂದ ಗಬ್ಬು ವಾಸನೆ ಬಡಾವಣೆಗಳನ್ನು ಆವರಿಸಿರುತ್ತದೆ. ಸೊಳ್ಳೆ ಮುಂತಾದ ಕ್ರಿಮಿಕೀಟಗಳು ಆವಾಸ ಸ್ಥಾನವಾಗಿವಿದೆ. ಅಲ್ಲದೆ ಚರಂಡಿಗಳ ಮೂಲಕ ಸಾಗುವ ಮಲೀನ ನೀರು ನೇರ ಶೇಖರಣೆಯಾಗುತ್ತಿರುವುದು ಸರ್ಕಾರಿ ಆಸ್ಪತ್ರೆಯ ಆವರಣದ ಹಿಂಭಾಗದಲ್ಲಿ. ಮಲೀನ ನೀರು ಶೇಖರಣೆಯಾಗಿ ಆಸ್ಪತ್ರೆಯ ರೋಗಿಗಳನ್ನು ಬಾಧಿಸುತ್ತಿದೆ.

ಕಸ ವಿಲೇವಾರಿ ಅಪರೂಪ: ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆಗಳಲ್ಲಿ ಕಸ ವಿಲೇವಾರಿದ್ದು ಸಮಸ್ಯೆಯೇ! ಅಪರೂಪಕ್ಕೊಮ್ಮೆ ಇಲ್ಲಿ ಕಸ ವಿಲೇವಾರಿಯಾಗುತ್ತಿದೆ. ಸಮಸ್ಯೆಗಳ ಸರಮಾಲೆಯಲ್ಲೇ ನರಳುತ್ತಿರುವ ಈ ಬಡಾವಣೆಗಳ ಕುಟುಂಬಗಳು ಪದೇ ಪದೆ ಪುರಸಭೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ.

Advertisement

ಸರ್ಕಾರಿ ಆಸ್ಪತ್ರೆಯ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿದ ನಾಗರಿಕರು

ಬಿಡದಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಇದೆ. ಇದನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದ್ದವು. ಸದರಿ ಟ್ಯಾಂಕಿನಿಂದಲೇ ಆಸ್ಪತ್ರೆಗೆ ಮತ್ತು ಬಸವರಾಜು ಬಡಾವಣೆಗೆ ನೀರು ಪೂರೈಕೆಯಾಗುತ್ತಿತ್ತು. ಕಾಂಕ್ರಿಟ್ ಟ್ಯಾಂಕ್‌ ನಿರ್ವಹಣೆಯ ಇಲ್ಲದೆ ಗಿಡಗಂಟಿಗಳು, ಬಳ್ಳಿಗಳಿಂದ ಆವೃತ್ತವಾಗಿದ್ದವು. ಟ್ಯಾಂಕ್‌ ಸ್ವಚ್ಛತೆಗೆ ಮನವಿ ಮಾಡಿಕೊಂಡರು ಆಸ್ಪತ್ರೆಯ ಅಧಿಕಾರಿಗಳಾಗಲಿ, ಪುರಸಭೆಯ ಅಧಿಕಾರಿಗಳಾಗಲಿ ಗಮನ ಹರಿಸಲಿಲ್ಲ. ಹೀಗಾಗಿ ಬಡಾವಣೆಯ ನಾಗರಿಕರೆ ಪರಸ್ಪರ ಸಹಕಾರದಲ್ಲಿ ಸಂಪನ್ಮೂಲ ಕ್ರೂಢೀಕರಿಸಿ ಟ್ಯಾಂಕ್‌ ಸ್ವಚ್ಛಗೊಳಿಸಿದ್ದಾರೆ. ನಾಗರಿಕರೇ ಕೈಗೊಂಡ ಈ ಕಾರ್ಯ ಪುರಸಭೆಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಬಿಡದಿಯ ನಾಗರಿಕರು ಹಿಡಿ ಶಾಪ ಹಾಕಿದ್ದಾರೆ. ಮೈಸೂರು ಅರಸರು ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವಾದ್ದರಿಂದ ಈ ಸ್ಥಳಕ್ಕೆ ಬಡದಿ ಎಂದು ಹೆಸರು ಬಂದಿದೆ ಎಂಬುದು ಇಲ್ಲಿನ ಹಿರಿಯರ ಹೇಳಿಕೆ. ಅರಸರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳ ಇಂದು ಸ್ವಚ್ಛ ಪರಿಸರ ಕಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ತಕ್ಷಣ ಇತ್ತ ಗಮನ ಹರಿಸಿ ಬಿಡದಿಯನ್ನು ಉಳಿಸಬೇಕಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್‌
Advertisement

Udayavani is now on Telegram. Click here to join our channel and stay updated with the latest news.

Next