Advertisement

ಕಡಲ್ಕೊರೆತಕ್ಕೆ ತಡೆಯಿಲ್ಲ-ಕಾಮಗಾರಿಗೆ ದುಡ್ಡಿಲ್ಲ

01:07 PM Jun 09, 2019 | Team Udayavani |

ಹೊನ್ನಾವರ: ಕಡಲ ಕೊರೆತ ಆರಂಭವಾಗಿ ಮೂರು ದಶಕಗಳಾದವು. ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮ ಸಂಪೂರ್ಣ ಜಲ ಸಮಾಧಿಯಾಯಿತು. ಇಲ್ಲಿಯ ಶಾಲೆ, ಮಸೀದಿ, ಚರ್ಚ್‌, ದೇವಸ್ಥಾನಗಳೆಲ್ಲಾ ಎಡದಂಡೆ ಕಾಸರಕೋಡ ಸೇರಿಕೊಂಡವು. ಪಾವಿನಕುರ್ವೆ ಮುಕ್ಕಾಲುಪಾಲು ಗ್ರಾಮ ಸಮುದ್ರ ಸೇರಿದೆ. ಹಾನಿ ಆಗುವುದು ಆಗುತ್ತಲೇ ಇದೆ, ತಡೆಗೋಡೆ ನಿರ್ಮಾಣ ಆದದ್ದು ಕುಸಿಯುತ್ತ ಹೊಸ ತಡೆಗೋಡೆಗೆ ಹಣ ನಿರೀಕ್ಷೆಯಲ್ಲಿ ಮತ್ತೆ ಸಮುದ್ರ ಕೊರೆತದ ದಿನ ಬಂದಿದೆ.

Advertisement

ಸಮುದ್ರ ಕೊರೆತ ಈ ಭಾಗದಲ್ಲಿ ಪ್ರತಿವರ್ಷವೂ ಕಾಡಲಿದೆ. ಎರಡು ವರ್ಷಗಳ ಹಿಂದೆ ಕಾಸರಕೋಡ ಭಾಗದಲ್ಲಿ ಕುಸಿದ 400ಮೀಟರ್‌ ತಡೆಗೋಡೆ ನಿರ್ಮಿಸಲು ಟೆಂಡರ್‌ ಕರೆಯಲಾಗಿತ್ತು. ಹಣ ಯಾವಾಗ ಬಿಡುಗಡೆಯಾಗುತ್ತದೆ ಗೊತ್ತಿಲ್ಲ. ಮಳೆಗಾಲದಲ್ಲಿ ಕಾಮಗಾರಿ ಸಾಧ್ಯವಿಲ್ಲ. ಇನ್ನು ಶರಾವತಿ ಸಂಗಮಕ್ಕೆ ಎದುರಾಗಿರುವ ತೊಪ್ಪಲಕೇರಿಯಲ್ಲಿ ಕಳೆದೆರಡು ವರ್ಷಗಳಿಂದ ನೀರು ಮನೆ ನುಗ್ಗುತ್ತಿದೆ. ತೋಟಗಳು, ಕೃಷಿ ಭೂಮಿಗಳು ಹಾಳುಗೆಡವುತ್ತಿದೆ. ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು 2017ರಲ್ಲಿ 852ಲಕ್ಷ ರೂ. ವೆಚ್ಚದಲ್ಲಿ 1ಕಿಮೀ ತಡೆಗೋಡೆ ನಿರ್ಮಿಸುವ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲ ಬಂದು ಹೋದರು. ಒಂದು ಪೈಸೆ ಹಣ ಮಾತ್ರ ಬಿಡುಗಡೆಯಾಗಿಲ್ಲ. ತೊಪ್ಪಲಕೇರಿ ನೂರಾರು ಮನೆಗಳ ಗೋಳು ಕೇಳುವವರಿಲ್ಲ. ನೇರ ಸಮುದ್ರ ತೊಪ್ಪಲಕೇರಿಗೆ ಅಪ್ಪಳಿಸುತ್ತದೆ. ಜನರ ಕೂಗು ದೂರ ಕೇಳುವುದಿಲ್ಲ, ಕಷ್ಟ ಕಾಣಿಸುವುದಿಲ್ಲ.

ಜಗತ್ತಿನ ಒಂದಲ್ಲ ಒಂದು ಭಾಗದಲ್ಲಿ ಸಮುದ್ರ ಕೊರೆತ ನಡೆದಿರುತ್ತದೆ. ಇದನ್ನು ತಡೆಯುವುದು ಸಾಧ್ಯವಿಲ್ಲ. ಹಾನಿಗೊಳಗಾದವರಿಗೆ ಪುನರ್ವಸತಿ ಮಾಡಿ ಎಂದು ಶಿವರಾಮ ಕಾರಂತರು ಎಂದೋ ಹೇಳಿದ್ದರು. ಸರ್ಕಾರ ಮಾತ್ರ ಕೋಟಿಕೋಟಿ ರೂಪಾಯಿ ತಡೆಗೋಡೆಗೆ ವೆಚ್ಚ ಮಾಡಿದೆ. ಹಳೆ ತಡೆಗೋಡೆ ಕುಸಿಯುತ್ತ ಸಾಗಿದೆ.

ಹೊಸ ತಡೆಗೋಡೆ ನಿರ್ಮಾಣವಾದ ಸ್ಥಳಕ್ಕಿಂತ ಇನ್ನೊಂದೆಡೆ ಸಮುದ್ರ ಕೊರೆತ ನಡೆದಿದೆ. ಹೊಸಹೊಸ ಯೋಜನೆಗಳು ಬಂದವು, ಹಣ ವೆಚ್ಚವಾಯಿತು. ಮರವಂತೆಯ ಕಡಲತೀರದಲ್ಲಿ ಮಾಡಿದಂತಹ ತಡೆಗೋಡೆ ಇಲ್ಲಿ ಯಾಕೆ ಸಾಧ್ಯವಿಲ್ಲ ? 2017ರಿಂದ ಕೊರೆಯುತ್ತಿರುವ ಶರಾವತಿ ಸಂಗಮಕ್ಕೆ ಎದುರಾಗಿರುವ ತೊಪ್ಪಲಕೇರಿಗೆ ನೇರ ಬಂದು ಸಮುದ್ರ ತೆರೆ ಅಪ್ಪಳಿಸುತ್ತದೆ. ಈವರೆಗೆ ಒಂದುಪೈಸೆ ಬಿಡುಗಡೆಯಾಗಿಲ್ಲ. ಈವರ್ಷವೂ ತೊಪ್ಪಲಕೇರಿ ಜನ ಗಂಡಾಂತರ ಎದುರಿಸಬೇಕಾಗಿದೆ. ಸಮುದ್ರ ಕೊರೆತ, ನೆರೆಹಾವಳಿ, ಕುಡಿಯುವ ನೀರಿನ ಸಮಸ್ಯೆ ಇವೆಲ್ಲಾ ಮಾಧ್ಯಮಗಳಿಗೆ ಎಂದೂ ಬತ್ತದ ಶಾಶ್ವತ ಸುದ್ದಿಮೂಲಗಳು. ಪ್ರತಿವರ್ಷ ಆಯಾಕಾಲದಲ್ಲಿ ಸುದ್ದಿಯಾಗುತ್ತದೆ, ಸರ್ಕಾರದ ಹೇಳಿಕೆ ಬರುತ್ತದೆ, ಮತ್ತೆ ಅದೇ ಹಾಡು, ಅದೇ ಪಾಡು.

Advertisement

Udayavani is now on Telegram. Click here to join our channel and stay updated with the latest news.

Next