ನವದೆಹಲಿ: ಬಲಪಂಥೀಯ ಸಂಘಟನೆಯಾದ ಬಜರಂಗದಳದ ವಿರುದ್ಧ ಕ್ರಮ ಕೈಗೊಳ್ಳುವಂತಹ ಯಾವುದೇ ಕಾರಣಗಳು ತಮಗೆ ಸಿಕ್ಕಿಲ್ಲ ಎಂದು ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಅವರು ಬುಧವಾರ(ಡಿಸೆಂಬರ್ 17, 2020) ಸಂಸದೀಯ ಸಮಿತಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಸಾಮಾಜಿಕ ಜಾಲತಾಣ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನದ ಕುರಿತು ಚರ್ಚಿಸಲು ಸಂಸದೀಯ ಸ್ಥಾಯಿ ಸಮಿತಿ ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಗೆ ಸಮನ್ಸ್ ನೀಡಿತ್ತು.
ದ ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಪ್ರಸ್ತಾಪಿಸಿದ್ದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ದೆಹಲಿಯ ಹೊರಭಾಗದಲ್ಲಿರುವ ಚರ್ಚ್ ವೊಂದರ ಮೇಲೆ ತಾನೇ ದಾಳಿ ನಡೆಸಿರುವುದಾಗಿ ಹೊಣೆ ಹೊತ್ತುಕೊಂಡಿದ್ದ ವಿಡಿಯೋವನ್ನು ಬಜರಂಗದಳ ಜೂನ್ ನಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿತ್ತು. ಈ ವಿಡಿಯೋವನ್ನು 2.5 ಲಕ್ಷದಷ್ಟು ಮಂದಿ ವೀಕ್ಷಿಸಿದ್ದರು.
ಆದರೆ ಬಜರಂಗದಳ ಕಂಟೆಂಟ್/ವಿಡಿಯೋವನ್ನು ನಿಷೇಧಿಸಿದರೆ ಕಂಪನಿಯ ವ್ಯವಹಾರ ಮತ್ತು ಭಾರತದಲ್ಲಿರುವ ತಮ್ಮ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಫೇಸ್ ಬುಕ್ ಕಂಪನಿಗೆ ಇತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ಆರೋಪಿಸಿತ್ತು.
ಈ ಆರೋಪ, ಪ್ರತ್ಯಾರೋಪದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸಂಸದೀಯ ಸ್ಥಾಯಿ ಸಮಿತಿ ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಮೋಹನ್ ಗೆ ಸಮನ್ಸ್ ನೀಡಿದ್ದು, ಅದರಂತೆ ಸಮಿತಿ ಮುಂದೆ ಹಾಜರಾಗಿದ್ದ ಅಜಿತ್ ಮೋಹನ್, ಫೇಸ್ ಬುಕ್ ಸತ್ಯಶೋಧನಾ(ಫ್ಯಾಕ್ಟ್ ಚೆಕ್) ತಂಡಕ್ಕೆ ಈವರೆಗೆ ಬಜರಂಗದಳ ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿ ಪೋಸ್ಟ್ ಮಾಡಿರುವ ಯಾವುದೇ ಅಂಶ ಕಂಡುಬಂದಿಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ದ ವಾಲ್ ಸ್ಟ್ರೀಟ್ ಜರ್ನಲ್ ಗೆ ಫೇಸ್ ಬುಕ್ ವಕ್ತಾರ ಆ್ಯಂಡಿ ಸ್ಟೋನ್, ನಾವು ಯಾವುದೇ ರಾಜಕೀಯ ಅಂಶ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೇ ಅಪಾಯಕಾರಿ ಎನಿಸಿದರೆ ವೈಯಕ್ತಿಕ ಹಾಗೂ ಸಂಘಟನೆ ವಿರುದ್ಧ ಜಾಗತಿಕವಾಗಿ ನಮ್ಮ ನೀತಿಯನ್ನು ಜಾರಿಗೊಳಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದರು.