Advertisement
ಅಂಪಾಯರ್ ಮಾಡಿರುವ ತಪ್ಪಿನ ಬಗ್ಗೆ ಆಕ್ರೋಶಗೊಂಡಿದ್ದ ಕೊಹ್ಲಿ ರೆಫ್ರಿ ಎದುರು ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ, ಜೋರಾಗಿ ಮಾತನಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒಂದು ವೇಳೆ ಈ ಘಟನೆ ನಿಜವೇ ಹೌದಾದರೆ ಐಪಿಎಲ್ ಸಂಘಟಕರು ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಆರ್‌ಸಿಬಿ ಫೇರ್ ಪ್ಲೆ ಅಂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಕೊನೆಯ ಎಸೆತವನ್ನು ಸರಿಯಾಗಿ ಗಮನಿಸದೇ ಎಡವಟ್ಟು ಮಾಡಿಕೊಂಡಿರುವ ಅಂಪೈರ್ ಬಗ್ಗೆ “ಸ್ಟಾರ್ ನ್ಪೋರ್ಟ್ಸ್’ ಸಿಬಂದಿ ನೀಡಿರುವ ಹೇಳಿಕೆಯೊಂದು ಕುತೂಹಲ ಕೆರಳಿಸಿದೆ. ಮಾಲಿಂಗ ಕೊನೆಯ ಎಸೆತ ಹಾಕುತ್ತಿದ್ದಾಗ ಅಂಪಾಯರ್ ಗಮನ ಬೌಲಿಂಗ್ ಕ್ರೀಸ್ ಮೇಲೆ ಇರಲೇ ಇಲ್ಲ. ಬದಲಿಗೆ ಅವರ ಗಮನ ಸಂಪೂರ್ಣ ಬ್ಯಾಟ್ಸ್‌ಮನ್ ಮೇಲಿತ್ತು ಎಂದಿದ್ದಾರೆ. ಎಕ್ಸ್‌ಟ್ರಾ ಇನ್ನಿಂಗ್ಸ್
ಆರ್‌ಸಿಬಿ-ಮುಂಬೈ
– ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಟೂರ್ನಿಯ ಆರಂಭದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತು. 2008, 2010, 2017 ಮತ್ತು 2018ರಲ್ಲಿ ಆರಂಭಿಕ ಪಂದ್ಯವನ್ನು ಸೋತಿದ್ದರೂ ದ್ವಿತೀಯ ಪಂದ್ಯವನ್ನು ಜಯಿಸಿತ್ತು.
– ಎಬಿ ಡಿ ವಿಲಿಯರ್ ಮೊದಲ ಬಾರಿಗೆ ಚೇಸಿಂಗ್ ಸೋಲಿನ ವೇಳೆ ಅಜೇಯರಾಗಿ ಉಳಿದರು. ಚೇಸಿಂಗ್ ವೇಳೆ ಎಬಿಡಿ ಅಜೇಯರಾಗಿ ಉಳಿದ ಹಿಂದಿನ 15 ಪಂದ್ಯಗಳಲ್ಲೂ ಅವರು ಪ್ರತಿನಿಧಿಸಿದ ತಂಡ ಜಯ ಸಾಧಿಸಿತ್ತು (ಆರ್‌ಸಿಬಿ-12, ಡೆಲ್ಲಿ-3).
– ಎಬಿಡಿ ಮೊದಲ ಸಿಕ್ಸರ್ ಬಾರಿಸಿದ ವೇಳೆ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆಡಲಾದ ಐಪಿಎಲ್ ಪಂದ್ಯಗಳಲ್ಲಿ 100 ಸಿಕ್ಸರ್‌ಗಳ ಸಾಧನೆಗೈದರು. ಎಬಿಡಿ ಒಂದೇ ಸ್ಟೇಡಿಯಂನಲ್ಲಿ ಸಿಕ್ಸರ್‌ಗಳ “ಶತಕ’ ಬಾರಿಸಿದ ಕೇವಲ 2ನೇ ಆಟಗಾರ. ಇದೇ ಅಂಗಳದಲ್ಲಿ ಕ್ರಿಸ್ ಗೇಲ್ 126 ಸಿಕ್ಸರ್ ಬಾರಿಸಿದ್ದು ದಾಖಲೆ.
– ಎಬಿಡಿ ಐಪಿಎಲ್‌ನಲ್ಲಿ 4 ಸಾವಿರ ರನ್ ಪೂರ್ತಿಗೊಳಿಸಿದ 10ನೇ ಆಟಗಾರನೆನಿಸಿದರು. ಎಬಿಡಿ ಈ ಸಾಧನೆಗೈದ 3ನೇ ವಿದೇಶಿ ಕ್ರಿಕೆಟಿಗ. ಇದು ಎಬಿಡಿ ಅವರ 131ನೇ ಇನ್ನಿಂಗ್ಸ್. ಈ ಲೆಕ್ಕಾಚಾರದಲ್ಲಿ ಅವರಿಗೆ 4ನೇ ಸ್ಥಾನ.
– ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿದರು. ಸುರೇಶ್ ರೈನಾ ಮೊದಲಿಗ. ಅವರು ಇದೇ ಋತುವಿನಲ್ಲಿ ಈ ಸಾಧನೆಗೈದಿದ್ದರು.
– ಯಜುವೇಂದ್ರ ಚಾಹಲ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50 ವಿಕೆಟ್ ಉರುಳಿಸಿದ ಮೊದಲ ಬೌಲರ್ ಆಗಿ ಮೂಡಿಬಂದರು. ಚಾಹಲ್ ಒಂದೇ ಕ್ರೀಡಾಂಗಣದಲ್ಲಿ 50 ವಿಕೆಟ್ ಉರುಳಿಸಿದ 3ನೇ ಬೌಲರ್. ಅಮಿತ್ ಮಿಶ್ರಾ “ಫಿರೋಜ್ ಶಾ ಕೋಟ್ಲಾ’ದಲ್ಲಿ (69) ಮತ್ತು ಹರ್ಭಜನ್ ಸಿಂಗ್ “ವಾಂಖೇಡೆ ಸ್ಟೇಡಿಯಂ’ನಲ್ಲಿ (53) ಈ ಸಾಧನೆ ಮಾಡಿದ್ದಾರೆ.
– ಚಾಹಲ್ ಆರ್‌ಸಿಬಿ-ಮುಂಬೈ ನಡುವಿನ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ 4ನೇ ಬೌಲರ್. ಈ ಯಾದಿಯ ಮೂವರು ಆರ್‌ಸಿಬಿ ಬೌಲರ್‌ಗಳೇ ಆಗಿದ್ದಾರೆ. ಉಳಿದಿಬ್ಬರೆಂದರೆ ಡೇವಿಡ್ ವೀಸ್ (2015ರಲ್ಲಿ 33ಕ್ಕೆ 4) ಮತ್ತು ಸಾಮ್ಯುಯೆಲ್ ಬದ್ರಿ (2017ರಲ್ಲಿ 9ಕ್ಕೆ 4). ಕಾಕತಾಳೀಯವೆಂದರೆ, ಈ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಸೋಲನುಭವಿಸಿದೆ.