Advertisement

ಹಿಂದೂ ದೇವತೆ, ಅಮಿತ್ ಶಾ ಅವಹೇಳನ ಪ್ರಕರಣ; ಹಾಸ್ಯ ನಟ ಮುನಾವರ್ ಬೇಲ್ ಗೆ ನಕಾರ

01:11 PM Jan 28, 2021 | Team Udayavani |

ಭೋಪಾಲ್: ಕಾಮಿಡಿ ಶೋನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಹಾಸ್ಯ ಕಲಾವಿದ ಮುನಾವರ್ ಫಾರೂಖಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಗುರುವಾರ(ಜನವರಿ 26, 2021) ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ.

Advertisement

ಇದನ್ನೂ ಓದಿ:ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ

ಪ್ರಕರಣದಲ್ಲಿ ಅಪರಾಧ ಎಸಗಿರುವ ಬಗ್ಗೆ ಈವರೆಗೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂದಿರುವ ಕೋರ್ಟ್, ತನಿಖೆ ಪ್ರಗತಿಯಲ್ಲಿದ್ದು, ದೋಷಾರೋಪದ ಕುರಿತು ಹೆಚ್ಚಿನ ಪುರಾವೆ ಬೇಕಾಗಿದೆ. ಈ ವೇಳೆ ತಾನು ಕಾಮಿಡಿ ಶೋನಲ್ಲಿ ಯಾವುದೇ ನೋವುಂಟು ಮಾಡುವ ಹೇಳಿಕೆ ನೀಡಿಲ್ಲ ಎಂಬ ಮುನಾವರ್ ವಾದವನ್ನು ಕೋರ್ಟ್ ತಳ್ಳಿಹಾಕಿರುವುದಾಗಿ ವರದಿ ವಿವರಿಸಿದೆ.

ಕಾಮಿಡಿ ಶೋನಲ್ಲಿ ಹಿಂದೂ ದೇವರುಗಳ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಜನವರಿ 2ರಂದು ಮುನಾವರ್ ಹಾಗೂ ಇತರ ನಾಲ್ಕು ಹಾಸ್ಯನಟರನ್ನು ಬಂಧಿಸಲಾಗಿತ್ತು.

ಇಂದೋರ್ ನ ಮಾಜಿ ಮೇಯರ್ ಮಾಲಿನಿ ಗೌರ್ ಹಾಗೂ ಸ್ಥಳೀಯ ಬಿಜೆಪಿ ಶಾಸಕನ ಪುತ್ರ ಏಕಲವ್ಯ ಸಿಂಗ್ ಗೌರ್ ನೀಡಿರುವ ದೂರಿನ ಮೇಲೆ ಮುನಾವರ್ ಫಾರೂಖಿ, ನಳಿನ್ ಯಾದವ್, ಎಡ್ವಿನ್ ಅಂಥೋನಿ, ಪ್ರಖರ್ ವ್ಯಾಸ್ ಮತ್ತು ಪ್ರಿಯಂ ವ್ಯಾಸ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು.

Advertisement

ಕಾಮಿಡಿ ಶೋ ಆಯೋಜಿಸಿದ್ದ ಆಯೋಜಕರು ಮುನಾವರ್ ಅವರನ್ನು ಕರೆಯಿಸಿದ್ದು, ಅವರು ಕೂಡಾ ಹಾಜರಿದ್ದರು. ಆದರೆ ಆ ಸಂದರ್ಭದಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆ ಕೊಟ್ಟಿಲ್ಲ ಎಂದು ಮುನಾವರ್ ಪರ ವಕೀಲರು ವಾದಿಸಿದ್ದರು.

ಆದರೆ ವಾದವನ್ನು ಕೋರ್ಟ್ ತಿರಸ್ಕರಿಸಿದ್ದು, ಕಾಮಿಡಿ ಶೋನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಧ್ಯತೆ ಹೆಚ್ಚಿದ್ದು, ತನಿಖೆ ಪ್ರಗತಿ ಹಂತದಲ್ಲಿರುವುದರಿಂದ ಆರೋಪ ತಳ್ಳಿಹಾಕುವಂತಿಲ್ಲ ಎಂದು ಪೀಠ ತಿಳಿಸಿದೆ.

ಇಂದೋರ್ ನ ಹೋಟೆಲ್ ವೊಂದರಲ್ಲಿ ಹೊಸ ವರ್ಷದ ಪ್ರಯುಕ್ತ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರಂಭದಲ್ಲಿ ಅಮಿತ್ ಶಾ ಅವರನ್ನು ಅವಹೇಳನ ಮಾಡಿ, ನಂತರ ಹಿಂದೂ ದೇವರನ್ನು ಅವಮಾನಿಸಿರುವುದು ಸರಿಯಲ್ಲ ಎಂದು ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಗೌರ್ ಸ್ನೇಹಿತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next