ಹೊಸದಿಲ್ಲಿ : ವರದಕ್ಷಿಣೆ ವಿರೋಧಿ ಕಾನೂನನ್ನು ಅಸಮಾಧಾನಿತ ಹೆಂಡತಿಯರು ತಮ್ಮ ಗಂಡ, ಅತ್ತೆ, ಮಾವನ ವಿರುದ್ಧ ದುರ್ಬಳಕೆ ಮಾಡುತ್ತಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಡೌರಿ ಕೇಸ್‌ಗಳಲ್ಲಿ ಆರೋಪಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಯಾವುದೇ ಬಂಧನ ನಡೆಸಬಾರದು ಎಂದು ಹೇಳಿದೆ.
ದಾಂಪತ್ಯದಲ್ಲಿನ ಬಿರುಕು, ಅಸಮಾಧಾನ ಇತ್ಯಾದಿಗಳ ಕಾರಣಕ್ಕೆ ವಿವಾಹಿತ ಮಹಿಳೆಯರು ಐಪಿಸಿ ಸೆ.498ಎ ಇದರ ದುರ್ಬಳಕೆ ಮಾಡಿ ಪತಿಯ ಹೆತ್ತವರು, ಅಪ್ರಾಪ್ತ ವಯಸ್ಸಿನ ಮಕ್ಕಳು, ಸಂಬಂಧಿಕರು, ಅಜ್ಜ-ಅಜ್ಜಿ ಮುಂತಾದವರ ವಿರುದ್ಧ ಸುಳ್ಳು ಕ್ರಿಮಿನಲ್ ಕೇಸುಗಳನ್ನು ಹಾಕುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಗಮನಿಸಿದ ಜಸ್ಟಿಸ್ ಎ ಕೆ ಗೋಯಲ್ ಮತ್ತು ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು, “ಅಮಾಯಕರ ವಿರುದ್ಧ ಹಾಕಲಾಗುವ ಈ ಬಗೆಯ ಸುಳ್ಳು ಕ್ರಿಮಿನಲ್ ಕೇಸುಗಳು ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದರಿಂದ ಅವುಗಳ ಸತ್ಯಾಸತ್ಯತೆಯನ್ನು ಸರಿಯಾಗಿ ಪರಾಮರ್ಶೆ ಮಾಡಿಯೇ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಸ್ಪಷ್ಟಪಡಿಸಿದೆ.
ವರದಕ್ಷಿಣೆ ಹಿಂಸೆಯ ನೆಪದಲ್ಲಿ ಹಾಕಲಾಗುವ ಸುಳ್ಳು ಕ್ರಿಮಿನಲ್ ಕೇಸುಗಳಿಂದ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ; ಕೌಟುಂಬಿಕ ವಿಷಯ ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಹೋಗಿ ಮನೆಯ ಸದಸ್ಯರಿಗೆ ತೀವ್ರವಾದ ಸಾಮಾಜಿಕ ಮುಜುಗರ ಉಂಟಾಗುತ್ತದೆ; ಮಹಿಳೆಯರಿಂದಲೇ ಅಮಾಯಕ ಮಹಿಳೆಯರು, ಪುರುಷರು ಮತ್ತು ಮಕ್ಕಳು ಕಾನೂನು ಕ್ರಮದ ಬಲಿಪಶುಗಳಾಗುತ್ತಾರೆ’ ಎಂದು ಕೋರ್ಟ್ ಹೇಳಿತು.
ಡೌರಿ ಕೇಸುಗಳಲ್ಲಿ ಆರೋಪಿತ ಸಂತ್ರಸ್ತರ ಹೇಳಿಕೆಗಳನ್ನು ನಿಜವೆಂದು ಒಪ್ಪಬೇಕಾಗಿಲ್ಲ ಎಂಬ ಈ ವರೆಗಿನ ಸಾಂಪ್ರದಾಯಿಕ ಕ್ರಮವನ್ನು ಮುರಿಯುವ ರೀತಿಯಲ್ಲಿ ಕೋರ್ಟ್ ತನ್ನ ತೀರ್ಪನ್ನು ನೀಡಿತು.
ಇದೇ ವೇಳೆ ಸುಪ್ರಿಂ ಕೋರ್ಟ್, “ವರದಕ್ಷಿಣೆ ಹಿಂಸೆ ಪ್ರಕರಣಗಳ ದೂರನ್ನು ನಿಭಾಯಿಸಲು ನೆರವಾಗುವ ಸಲುವಾಗಿ ಎಲ್ಲ ರಾಜ್ಯಗಳು ಪ್ರತಿಯೊಂದು ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಸಮಿತಿಯೊಂದನ್ನು ರೂಪಿಸಬೇಕು’ ಎಂಬ ಸಲಹೆಯನ್ನು ನೀಡಿತು.