ಮೈಸೂರು: ಕೋವಿಡ್-19 ಸೋಂಕಿನ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಇದೆ. ಬೇರೆ ರಾಜ್ಯದಲ್ಲಿ ವಾತಾವರಣ ಹೇಗಿದೆಯೋ ಗೊತ್ತಿಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಲ್ಲ ಎಂದು ಸಚಿವ ನಾರಾಯಣ ಗೌಡ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ವೈರಸ್ ನ ಸಾಮರ್ಥ್ಯ ಕುಗ್ಗಿದೆ. ವೈದ್ಯರು ಹೇಳುವ ಪ್ರಕಾರ ಕೋವಿಡ್-19 ವೈರಸ್ ಪವರ್ ಕಡಿಮೆ ಆಗಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದರು.
ಮುಂಬೈನಲ್ಲಿ ಸಿಕ್ಕಾಪಟ್ಟೆ ಜನಸಂಖ್ಯೆಯಿದೆ. ಶೇ 50ರಷ್ಟು ಸ್ಲಮ್ ಗಳಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು ಬರುತ್ತಿದೆ ಎಂದ ಅವರು ಕೋವಿಡ್ ನಿಯಂತ್ರಣ ಮಾಡಲು ನಮ್ಮ ಸರ್ಕಾರ ಎಲ್ಲ ಕ್ರಮ ತೆಗದುಕೊಂಡಿದೆ. ಇದಕ್ಕಾಗಿ ಮುಖ್ಯಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆ ಆರ್ ಎಸ್ ನಲ್ಲಿ ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ವಿವಾದದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ರಾಜವಂಶಸ್ಥರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರವರನ್ನು ಭೇಟಿ ಮಾಡುತ್ತೇವೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದರು.
ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರವಾಗಿದೆ. ಹಾಗೆ ವಿಶ್ವೇಶ್ವರಯ್ಯ ಅವರ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಎರಡು ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.