Advertisement

ಮನುಷ್ಯನಷ್ಟು ಅಮಾನುಷ ಪ್ರಾಣಿ ಮತ್ತೊಂದಿಲ್ಲ :ಶ್ರೀನಾದ

12:14 PM Sep 22, 2018 | |

ಬಳ್ಳಾರಿ: ಮಕ್ಕಳನ್ನೂ ಬಿಡದ ವಿಕೃತ ಮನಃಸ್ಥಿತಿಗಳನ್ನು ನೋಡಿದಾಗ ಮನುಷ್ಯನಷ್ಟು ಅಮಾನುಷವಾದ ಪ್ರಾಣಿ ಜಗತ್ತಿನಲ್ಲಿ ಮತ್ತೂಂದಿಲ್ಲ ಎನಿಸಿದೆ ಎಂದು ತತ್ವಪದಕಾರ ಶ್ರೀನಾದ ಮಣಿನಾಲ್ಕೂರು ಅಭಿಪ್ರಾಯ ಪಟ್ಟರು.

Advertisement

ನಗರದ ಪತ್ರಿಕಾಭವನದಲ್ಲಿ ಸಂಸ್ಕೃತಿ ಪ್ರಕಾಶನ, ಸೂಫಿ ಪ್ರಕಾಶನ ಸಹಯೋಗದಲ್ಲಿ ಶುಕ್ರವಾರ ನಡೆದ “ಸಂಸ್ಕೃತಿ ಸಂವಾದ-ಸೂಫಿಗಾಯನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನನ್ನನ್ನು ಕಾಡಿದ ಅನೇಕ ಸಂಗತಿಗಳಿಗೆ ಉತ್ತರ ಹುಡುಕಲು ಹೊರಟಿದ್ದೇನೆ. ಎಲ್ಲಿಗೆ ? ಯಾವಾಗ ? ಏನು ? ಎತ್ತ ? ಯಾವ ವಿಚಾರಗಳು ನನ್ನ ಮುಂದಿಲ್ಲ. ಕರ್ನಾಟಕದ ಎಲ್ಲ ಕಡೆ ಓಡಾಡುವ, ಜನರನ್ನು ಸಂಧಿಸುವ, ಚರ್ಚಿಸುವ, ಅವರ ವಿಚಾರಗಳನ್ನು ಅರ್ಥೈಸುವ, ಅದರೊಳಗಿನೊಂದು ಸತ್ಯವನ್ನು ಕಂಡುಕೊಳ್ಳುವ ಆಶಯದಲ್ಲಿ ತಂಬೂರಿ ಹಿಡಿದು ಊರೂರು ಅಲೆಯುತ್ತಿದ್ದೇನೆ ಎಂದು
ತಿಳಿಸಿದರು.

ಸಿನಿಮಾ ಮತ್ತು ಧಾರಾವಾಹಿಗಳು ಕ್ರೌರ್ಯವನ್ನು ವಿಜೃಂಭಿಸುತ್ತಿದ್ದು, ಇದರಿಂದ ಜನರ ಅಭಿರುಚಿಯನ್ನೇ ಬದಲಾಯಿಸುತ್ತಿವೆ. ಪರಿಣಾಮ ಮನುಷ್ಯರ ನಡುವೆ ಅಂತರ ಹೆಚ್ಚುತ್ತಿದೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಎಲ್ಲರೂ ಮನುಷ್ಯರಾಗಿರುವಾಗ ಈ ಎಲ್ಲವೂ ಏಕೆ? ಇದಕ್ಕೆ ಕಾರಣಗಳೇನಿರಬಹುದು? ಎಂಬ ಹಲವು ಸಂಗತಿಗಳು ನನ್ನನ್ನು ಕಾಡಿವೆ. ಈ ಎಲ್ಲದಕ್ಕೆ ಉತ್ತರಕ್ಕಾಗಿ ಜನರೊಂದಿಗೆ ಮುಖಾಮುಖೀಯಾಗಿಸುವ
ಸಲುವಾಗಿ ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದೇನೆ. ಶಾಲಾ ಕಾಲೇಜುಗಳಲ್ಲಿ ತತ್ವಪದಗಳನ್ನು ಹಾಡುತ್ತಲೇ ಅವರೊಂದಿಗೆ ಬೆರೆತು ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದೇನೆ ಎಂದರು.

ನಂತರ ಮಾತಿನ ನಡುವೆ ಅಂಬ್ರಹಾಂ ಲಿಂಕನ್‌ ಅವರು ಬರೆದ “ಕಲಿಸು’ ಎಂಬ ಹಾಡು ಸೇರಿ ವಿವಿಧ ಲೇಖಕರು ಬರೆದ ಸೂಫಿಗಾಯನ ಮತ್ತು ತತ್ವಪದಗಳನ್ನು ಹಾಡಿದರು. ತಂಬೂರಿ ಮತ್ತು ಬಂದೂಕಿಗಿರುವ ವ್ಯತ್ಯಾಸ ಜನರಿಗೆ ಇನ್ನು ಗೊತ್ತಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀನಾದ ಮಣಿನಾಲ್ಕೂರು, ಬೆಂಗಳೂರಿನ ಮೆಟ್ರೋದಲ್ಲಿ ನಾನು ತಂಬೂರಿ ಹಿಡಿದು ಹೋಗಲು ಅವಕಾಶ ನೀಡಿಲ್ಲ. ಸುಮಾರು ಒಂದು ಗಂಟೆ ಕಾಯಿಸಿದ ಬಳಿಕ ಹೋಗಲು ಅವಕಾಶ ನೀಡಿದರೂ, ಪ್ರಯಾಣ ಮಾಡಲು ಹರಸಾಹಸ ಮಾಡಬೇಕಾಯಿತು. ನನ್ನ ಬಳಿ ಗನ್‌ಇಲ್ಲ. ತಂಬೂರಿಗೂ ಪ್ರವೇಶವಿಲ್ಲ ಎಂದಾದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಇಂತಹ ಹಲವು ಸಂಗತಿಗಳು ನನ್ನನ್ನು ಕಾಡುತ್ತಿವೆ. ಕರಾವಲಿ ಭಾಗದಲ್ಲಿ ತಂಬೂರಿ ಎಂದರೆ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next