Advertisement

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ ಸ್ಪಷ್ಟನೆ

02:55 PM Dec 05, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಯಾವುದೇ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಕೇಳಿದ್ದೇವೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಮೈತ್ರಿ ಇಲ್ಲ. ಇದನ್ನ ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

‘ಜಿಲ್ಲೆಯಲ್ಲೂ ಬಿಜೆಪಿ ಕಟ್ಟಿ ಬೆಳೆಸುತ್ತೇನೆ ಎಂದು ಪಣತೊಟ್ಟು, ಕೆ.ಆರ್.ಪೇಟೆಯಲ್ಲಿ ಗೆದ್ದು ನಾರಾಯಣಗೌಡ ಅವರು ಸಚಿವರಾಗಿದ್ದಾರೆ. ಇವತ್ತುನನಗೆ ನೀಡಿದ ಸ್ವಾಗತ ನೋಡಿ ನಾನು ಮಂಡ್ಯಗೆ ಬಂದಿದ್ದೇನೋ, ಶಿವಮೊಗ್ಗಕ್ಕೆ ಬಂದಿದ್ದೆನೋ ಅನ್ನೋ ಅನುಮಾನ ಮಾಡುವಂತಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.

‘ಪಾಂಡವಪುರದಲ್ಲಿ ಉತ್ತಮವಾಗಿ ಸಕ್ಕರೆ ಕಾರ್ಖಾನೆ ನಡೆಯುತ್ತಿದೆ. ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ಕೂಡ ಆರಂಭವಾಗಲಿದೆ. ನಾರಾಯಣಗೌಡರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಾಲ್ಕೈದು ಸ್ಥಾನಗಳನ್ನ ಗೆಲ್ಲಬೇಕು. ನಾನು ಕೈ ಜೋಡಿಸುತ್ತೇನೆ. ಕಾಂಗ್ರೆಸ್ ನಾಯಕರಿಗೆ ಹೇಳುತ್ತೇನೆ, ಹಣ, ಹೆಂಡದ ಬಲದಿಂದ ಜಾತಿ ವಿಷ ಬೀಜ ಬಿತ್ತುತ್ತಿದ್ದ ನಿಮ್ಮ ಕಾಲ ಹೋಗಿದೆ. ರಾಜ್ಯದಲ್ಲಿ ಒಂದಿಬ್ಬರಿಂದ ಸ್ವಲ್ಪ ಉಸಿರಾಡುತ್ತಿದೆ. ಆ ಉಸಿರನ್ನು ನಿಲ್ಲಿಸಬೇಕು ಅಂದ್ರೇ, ನಮ್ಮ ಅಭ್ಯರ್ಥಿ ಬಿಸಿ ಮಂಜು ಅವರನ್ನು ಗೆಲ್ಲಿಸಬೇಕು’ ಎಂದು ಬಿಎಸ್‌ವೈ ಕರೆ ನೀಡಿದರು.

‘ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಅಂತಹ ಮಹಾನ್ ನಾಯಕರ ಪಕ್ಷದಲ್ಲಿ ಸದಸ್ಯರು ಆಗಿರೋದು ಹೆಮ್ಮೆ ವಿಚಾರ. 20 ಸ್ಥಾನದಲ್ಲಿ ಮಂಜು ಸೇರಿ 17-18 ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಸ್ವಂತ ಜಿಲ್ಲೆ ಮಂಡ್ಯದಲ್ಲಿ ಈ ರೀತಿಯ ಸ್ವಾಗತ ಸಿಗುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಇಷ್ಟು ಜನ ಸೇರ್ತಾರೆ ಎಂದು ಊಹಿಸಿರಲಿಲ್ಲ. ನಾರಾಯಣಗೌಡರು ಹಾಗೂ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

Advertisement

ಮುಂದಿನ ದಿನಗಳಲ್ಲಿ ವಿಜಯೇಂದ್ರ ಸೇರಿದಂತೆ ನಮ್ಮ ಪಕ್ಷದ ನಾಯಕರ ಜೊತೆ ಮತ್ತೆ ಬರುತ್ತೇನೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಬಿಎಸ್ ಯಡಿಯೂರಪ್ಪನವರು ಹೇಳಿದರು.

ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ನಾರಾಯಣಗೌಡರು ಮಂಡ್ಯ ಜಿಲ್ಲೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಪಣತೊಟ್ಟಿದ್ದಾರೆ. ಜಿಲ್ಲೆಗೆ ಕೆಲಸ ಆಗಲಿಲ್ಲ ಅಂತಾ ಗುಡುಗಿದರೇ ಇಡೀ ಕ್ಯಾಬಿನೆಟ್ ನಡುಗುತ್ತೆ ಎಂದು ಸಚಿವ ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಅಭ್ಯರ್ಥಿ ಬಿಸಿ ಮಂಜು ಅವರು ಇಡೀ ಕ್ಷೇತ್ರದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಳೆದ ಆರು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇನ್ನು ಗತಿಗೆಟ್ಟು ನಿಂತಿದ್ದ ಕಾಂಗ್ರೆಸ್ ನಾಯಕರು, ಅವನು ನೀಡುವ ಕಾಸಿಗಾಗಿ ಅವನ ಹಿಂದೆ ಹೋಗ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಮಶೇಖರ್ ಗುಡುಗಿದರು. ಅಲ್ಲದೇ ಮಂಡ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲವೇ ಇಲ್ಲ ಎಂದು ಸೋಮಶೇಖರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next