Advertisement

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

01:47 AM May 20, 2024 | Team Udayavani |

ಉಡುಪಿ: ಈ ತಿಂಗಳ ಅಂತ್ಯದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭ ಗೊಳ್ಳಲಿವೆ. ಕರಾವಳಿ ಸಹಿತ ರಾಜ್ಯಾದ್ಯಂತ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಧಾವಂತದಲ್ಲಿದ್ದಾರೆ. ಈ ಮಧ್ಯೆ ಎಲ್‌ಕೆಜಿ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿ ರಲೇ ಬೇಕು ಎಂಬ ಕಟ್ಟುನಿಟ್ಟಿನ ನಿಯಮ ಪೋಷಕರನ್ನು ಚಿಂತೆಗೀಡು ಮಾಡಿದೆ.

Advertisement

ಹೀಗಾಗಿ ಕೆಲವು ಪೋಷಕರು ದಾಖಲೆ ಪತ್ರದಲ್ಲಿ ಮಗುವಿನ ಜನ್ಮ ದಿನಾಂಕವನ್ನೇ ಬದಲಿಸಲು ಮುಂದಾಗಿದ್ದಾರೆ. ಇನ್ನು ಕೆಲವರು ಮಕ್ಕಳು ಒಂದು ವರ್ಷದ ಭವಿಷ್ಯ ಹಾಳಾಗಲಿದೆ ಎಂದು ಬೇಸರ ವ್ಯಕ್ತಪಡಿಸತೊಡಗಿದ್ದಾರೆ.
2024-25ನೇ ಸಾಲಿನಲ್ಲಿ ಎಲ್‌ಕೆಜಿಗೆ ದಾಖಲಾಗುವ ಮಗುವಿಗೆ 4 ವರ್ಷ ಹಾಗೂ ಯುಕೆಜಿಗೆ ದಾಖಲಾಗು ವವರಿಗೆ 5 ವರ್ಷ ಪೂರ್ಣ ತುಂಬಿರಬೇಕು. 1ನೇ ತರಗತಿಗೆ ದಾಖಲಾಗುವ ಮಗುವಿಗೆ 5.7 (ಐದು ವರ್ಷ ಏಳು ತಿಂಗಳು) ವರ್ಷ ತುಂಬಿದರೆ ಸಾಕು (ಗರಿಷ್ಠ 7 ವರ್ಷ ಮೀರುವಂತಿಲ್ಲ). 2025-26ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುವ ಮಗುವಿಗೆ 6 ವರ್ಷ ತುಂಬಿರಲೇ ಬೇಕು ಎಂಬ ಸರಕಾರದ ನಿಯಮ ಕೆಲವು ಮಕ್ಕಳ ಪಾಲಕ, ಪೋಷಕರನ್ನು ಕಂಗೆಡಿಸಿದೆ.

ಅದರಲ್ಲೂ 2020ರ ಬಳಿಕ ಜೂನ್‌, ಜುಲೈ, ಆಗಸ್ಟ್‌ನಲ್ಲಿ ಹುಟ್ಟಿದ ಮಕ್ಕಳಿಗೆ ಸಮಸ್ಯೆ ಎದುರಾಗುತ್ತಿದೆ. 3.10 ವರ್ಷ, 3.11ವರ್ಷ ಮಾತ್ರವಲ್ಲದೆ 4 ವರ್ಷಕ್ಕೆ ಕೇವಲ 10-15 ದಿನ ಕಡಿಮೆ ಇದ್ದರೂ ಎಲ್‌ ಕೆಜಿಗೆ ಸೇರಲು ಸಾಧ್ಯವಾಗುವುದಿಲ್ಲ. ಇದರಿಂದ ಒಂದು ವರ್ಷ ವ್ಯರ್ಥವಾಗಲಿದೆ ಎನ್ನುವ ಆತಂಕ ಪೋಷಕರದ್ದು. ಜನ್ಮ ದಿನಾಂಕವನ್ನೇ ತಿದ್ದಿ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸಲು ಯೋಚಿಸುತ್ತಿದ್ದಾರೆ.

ಎಸೆಸೆಲ್ಸಿ ಪರೀಕ್ಷೆಗೆ ಸಮಸ್ಯೆ
ಕೆಲವು ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮವನ್ನು ಅನಿವಾರ್ಯವಾಗಿ ಪಾಲಿಸಲು ತೊಡಗಿದ್ದರೆ ಇನ್ನು ಕೆಲವು ಸಂಸ್ಥೆಗಳು 4 ವರ್ಷ ಪೂರ್ಣಗೊಳ್ಳದ ಮಕ್ಕಳನ್ನು ಕೂಡ ಎಲ್‌ಕೆಜಿಗೆ ಸೇರಿಸಿಕೊಳ್ಳುತ್ತಿವೆ.

ಈಗಿನ ನಿಯಮದ ಪ್ರಕಾರ 10ನೇ ತರಗತಿ ಪರೀಕ್ಷೆ ಬರೆಯಲು 15 ವರ್ಷ ಆಗಿರಬೇಕು. ಈಗ 4 ವರ್ಷ ತುಂಬಿರದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡರೆ ಅವರು ಎಸೆಸೆಲ್ಸಿ ಪರೀಕ್ಷೆ ಬರೆಯುವಾಗ ಸಮಸ್ಯೆ ಎದುರಾಗಲಿದೆ. ಹೀಗಾಗಿ ಬಹುತೇಕ ಶಾಲೆಗಳು ಭವಿಷ್ಯದಲ್ಲಿ ಮಕ್ಕಳಿಗೆ ಆಗಬಹುದಾದ ಸಮಸ್ಯೆಯನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತಿವೆ. ಸರಕಾರದ ಈ ನಿಯಮವನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪಿಗಾಗಿ ಕಾಯುವಂತಾಗಿದೆ.

Advertisement

ಕೋರ್ಟ್‌ಗೆ ಮೊರೆ
2024-25ನೇ ಸಾಲಿನಿಂದ 4 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಎಲ್‌ಕೆಜಿಗೆ ಸೇರಿಸಿಕೊಳ್ಳಬೇಕೆಂಬುದು ನಿಯಮ. ನಾಲ್ಕು ವರ್ಷಕ್ಕೆ ಒಂದೆರಡು ತಿಂಗಳು, 15 ದಿನ ಅಥವಾ 10 ದಿನ ಕಡಿಮೆ ಇರುವ ಮಕ್ಕಳಿಗೆ ಸಮಸ್ಯೆ ಯಾಗುತ್ತಿದೆ. ಈ ಹಿಂದೆ ಇದ್ದಂತೆ 5.7 ವರ್ಷ ಆದವರಿಗೆ 1ನೇ ತರಗತಿಗೆ ಅವಕಾಶ ನೀಡುವಂತೆ ಅದೇ ಮಾನದಂಡ ದಲ್ಲಿ ಎಲ್‌ಕೆಜಿ, ಯುಕೆಜಿಗೆ ಈ ವರ್ಷ ದಾಖಲಾತಿಗೆ ಅವಕಾಶ ನೀಡುವಂತೆ ಕೆಲವು ಮಕ್ಕಳ ಪಾಲಕ, ಪೋಷಕರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ನ್ಯಾಯಾಲಯದ ನಿರ್ದೇಶನಕ್ಕೆ ಕಾಯ ಲಾಗುತ್ತಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಜೂನ್‌ 1ಕ್ಕೆ 4 ವರ್ಷ ಪೂರ್ಣವಾಗಿರಬೇಕು
2024-25ನೇ ಸಾಲಿನಲ್ಲಿ ಎಲ್‌ಕೆಜಿ ಸೇರುವ ಮಗುವಿಗೆ ಜೂನ್‌ 1ಕ್ಕೆ 4 ವರ್ಷ ಪೂರ್ಣವಾಗಿರಬೇಕು. 2024-25ನೇ ಸಾಲಿ ನಲ್ಲಿ ಯುಕೆಜಿ ಸೇರುವ ಮಗುವಿಗೆ ಜೂನ್‌ 1ಕ್ಕೆ 5 ವರ್ಷ ಪೂರ್ಣ ವಾಗಿರಬೇಕು. 2024-25ನೇ ಸಾಲಿನಲ್ಲಿ 1ನೇ ತರಗತಿ ಸೇರುವ ಮಗುವಿಗೆ ಜೂನ್‌ 1ಕ್ಕೆ 5 ವರ್ಷ 7 ತಿಂಗಳು ಆಗಿದ್ದರೂ ದಾಖಲಿಸ ಬಹುದು. ಆದರೆ 2025-26ನೇ ಸಾಲಿನಲ್ಲಿ 1ನೇ ತರಗತಿ ಸೇರುವ ಮಗುವಿಗೆ ಜೂನ್‌ 1ಕ್ಕೆ 6 ವರ್ಷ ಪೂರ್ಣವಾಗಿರಬೇಕು.

ಈ ವರ್ಷ ಎಲ್‌ಕೆಜಿಗೆ ಸೇರಲು ಮಗುವಿಗೆ 4 ವರ್ಷ ಆಗಿರಲೇ ಬೇಕು. ಇದು ಸರಕಾರದ ನಿಯಮ. ಅಧಿಕಾರಿಗಳು ಏನೂ ಮಾಡಲು ಸಾಧ್ಯವಿಲ್ಲ. ಕೆಲವು ಪಾಲಕ, ಪೋಷಕರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಒಂದು ತಿಂಗಳು ಅಲ್ಲ, ನಾಲ್ಕು ವರ್ಷಕ್ಕೆ ಒಂದೆರಡು ದಿನ ಕಡಿಮೆಯಿದ್ದರೂ ಸೇರಿಸಿಕೊಳ್ಳಲಾಗದು. ಏನೇ ಬದಲಾವಣೆ ಆಗಬೇಕಾದರೂ ಸರಕಾರವೇ ತೀರ್ಮಾನ ಕೈಗೊಳ್ಳಬೇಕು.
– ಪ್ರಸನ್ನ ಕುಮಾರ್‌ ಎಂ.ಎಸ್‌.,ನಿರ್ದೇಶಕರು, ಪ್ರಾಥಮಿಕ ಶಿಕ್ಷಣ, ಶಾಲಾ ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next