Advertisement

ಹೆಲ್ಮೆಟ್ ಹಾಕದಿದ್ದರೆ ಕಾಲೇಜಿಗಿಲ್ಲ ಪ್ರವೇಶ.!

09:59 AM Sep 25, 2019 | Team Udayavani |

ಬಾಗಲಕೋಟೆ: ಹೆಲ್ಮೆಟ್‌ ಇಲ್ಲದಿದ್ರೆ ಪೆಟ್ರೋಲ್‌ ಬಂಕ್‌ ನಲ್ಲಿ ಪೆಟ್ರೋಲ್‌ ಹಾಕಲ್ಲ ಈಗ ಇದು ಹಳೆಯ ಸುದ್ದಿ. ಹೆಲ್ಮೆಟ್‌ ಇಲ್ಲದೇ ವಿದ್ಯಾರ್ಥಿಗಳು ಇನ್ಮುಂದೆ ಕಾಲೇಜಿಗೆ ಬಂದರೆ ಕಾಲೇಜು ತರಗತಿಗೆ ಪ್ರವೇಶ ಇಲ್ಲ ಇದು ಹೊಸ ಸುದ್ದಿ.

Advertisement

ಹೌದು. ಇನ್ನು ಮುಂದೆ ವಿದ್ಯಾರ್ಥಿಗಳು ಹೆಲ್ಮೆಟ್‌ ಹಾಕದಿದ್ರೆ,ಸಂಚಾರಿ ನಿಯಮ ಪಾಲಿಸದಿದ್ರೆ, ಬೈಕ್‌ಗಳ ದಾಖಲೆಸರಿಯಾಗಿ ಇಟ್ಟುಕೊಳ್ಳದಿದ್ರೆ ಕಾಲೇಜಿಗೆ ಪ್ರವೇಶ ಕೊಡುವುದಿಲ್ಲ. ಜಿಲ್ಲೆಯ ಪದವಿ ಕಾಲೇಜುಗಳ ಮುಖ್ಯಸ್ಥರು ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಇಂತಹ ನಿರ್ಧಾರ ಕೈಗೊಂಡಿದ್ದು, ಇದು ಸೆ.27ರಿಂದ ಜಾರಿಗೊಳ್ಳಲಿದೆ.

ಹೊಸ ಮೋಟಾರು ವಾಹನ ಕಾಯ್ದೆಯನ್ನು ತಳ ಮಟ್ಟದಲ್ಲೇ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿವಿಧ ಹಂತದ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೈಕ್‌ ಮತ್ತು ಕಾರು ಸವಾರರು ಹೆಲ್ಮೆಟ್‌, ಸೀಟ್‌ ಬೆಲ್ಟ್, ದಾಖಲೆ ಮತ್ತು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್‌ ಇಲ್ಲದಿದ್ರೆ ಪೆಟ್ರೋಲ್‌ ಬಂಕ್‌ ನಲ್ಲಿ ಪೆಟ್ರೋಲ್‌ ಕೊಡಲ್ಲ. ಇದನ್ನು ಎಲ್ಲ ಪೆಟ್ರೋಲ್‌ ಬಂಕ್‌ ಮಾಲಿಕರೊಂದಿಗೆ ಸಭೆ ನಡೆಸಿ ಅವರ ಒಪ್ಪಿಗೆ ಪಡೆಯಲಾಗಿದೆ. ಅಲ್ಲದೇ ಪ್ರತಿ ಪೆಟ್ರೋಲ್‌ ಬಂಕ್‌ನಲ್ಲೂ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ, ಅಲ್ಲಿಯೇ ದಂಡ ವಿಧಿಸುವ ಪ್ರಕ್ರಿಯೆ ಕೂಡ ಜಾರಿಗೊಳ್ಳಲಿದೆ. ಅದರೊಂದಿಗೆ ಕಾಲೇಜು ವಿದ್ಯಾರ್ಥಿಗಳು ಹೊಸ ಕಾನೂನು ಪಾಲಿಸುವನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

ದಾಖಲೆ ಸಮೇತ ಬರಬೇಕು: ಕಾಲೇಜು ವಿದ್ಯಾರ್ಥಿಗಳು ಇನ್ಮುಂದೆ ಹೆಲ್ಮೆಟ್‌ ಹಾಕಿಕೊಳ್ಳುವ ಜತೆಗೆ ಬೈಕ್‌ಗಳ ದಾಖಲೆ ಸಮೇತ ಕಾಲೇಜಿಗೆ ಬರಬೇಕು. ಬೈಕ್‌ ಜತೆಗೆ ಕಾಲೇಜಿಗೆ ಬರುವಾಗ ಹೆಲ್ಮೆಟ್‌ ಹಾಕಿರದಿದ್ದರೆ ಅವರಿಗೆ ತರಗತಿಯಲ್ಲಿ ಪ್ರವೇಶ ಕೊಡಲ್ಲ. ಈ ಕುರಿತು ಎಲ್ಲ ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ. ಇದಕ್ಕೆ ಜಿಲ್ಲೆಯ ಕಾಲೇಜುಗಳ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ.

ಎಷ್ಟಿವೆ ಕಾಲೇಜು: ಪದವಿ ಪೂರ್ವ ಶಿಕ್ಷಣ ಇಲಾಖೆಯಡಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು 44 ಇವೆ. 38 ಅನುದಾನಿತ, 61 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿ ಸುಮಾರು 60 ಸಾವಿರವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಪದವಿ ಪೂರ್ವ ವಿದ್ಯಾರ್ಥಿಗಳು 18 ವಯೋಮಿತಿ ಒಳಗಿದ್ದು, ಅವರಿಗೆ ವಾಹನ ಚಾಲನಾ ಪರವಾನಗಿ ಇರಲ್ಲ. ಹೀಗಾಗಿ ಅವರು ಬೈಕ್‌ ಅಥವಾ ಕಾರು ಸಮೇತ ಕಾಲೇಜಿಗೆ ಬರುವಂತಿಲ್ಲ. ಇನ್ನು ಉನ್ನತ ಶಿಕ್ಷಣದಡಿ ಬರುವ ಸರ್ಕಾರಿ ಪದವಿ ಕಾಲೇಜುಗಳು 18 ಇದ್ದು, 45 ಖಾಸಗಿ ಪದವಿ ಕಾಲೇಜುಗಳಿವೆ. ಇಲ್ಲಿ ಅಂದಾಜು 26ರಿಂದ 28 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ 18 ವರ್ಷ ಮೇಲ್ಪಟ್ಟವರಿದ್ದು, ವಾಹನ ಚಾಲನೆ ಪರವಾನಗಿ ಜತೆಗೆ ಹೊಸ ಮೋಟಾರು ಕಾಯ್ದೆಯಡಿ ಎಲ್ಲ ದಾಖಲೆ, ಹೆಲ್ಮೆಟ್‌ ಸಮೇತಕಾಲೇಜಿಗೆಬರಬೇಕು. ಒಂದು ವೇಳೆ, ನಿಯಮ ಉಲ್ಲಂಘಿಸಿದರೆ, ಯಾವುದೇ ಮುಲಾಜಿಲ್ಲದೇ ಅವರನ್ನು ತರಗತಿಯಿಂದ ಹೊರ ಹಾಕಬೇಕು ಎಂಬುದು ಪೊಲೀಸ್‌ ಇಲಾಖೆ ಮನವಿ.

Advertisement

ಈ ನೀತಿ ಅನುಸರಿಸುವುದರಿಂದ 18 ವರ್ಷದೊಳಗಿನ ಮಕ್ಕಳು ಬೈಕ್‌ ಓಡಿಸುವುದು ನಿಲ್ಲಿಸುತ್ತಾರೆ. ಅಲ್ಲದೇ ಹೆಲ್ಮೆಟ್‌ ಇಲ್ಲದೇ ಬೈಕ್‌ ರೈಡಿಂಗ್‌ ಮಾಡುವುದೂ ನಿಲ್ಲುತ್ತದೆ ಎಂಬುದು ಇಲಾಖೆಯ ಆಶಯ. ಇದನ್ನು ಕಾಲೇಜುಗಳ ಮುಖ್ಯಸ್ಥರಿಗೆ ಎಸ್ಪಿ ಲೋಕೇಶ ಮನವರಿಕೆ ಮಾಡಿದ್ದು, ಎಲ್ಲ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರು, ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ.

ಶಿಕ್ಷಕ-ಉಪನ್ಯಾಸಕರಿಗೂ ಕಡ್ಡಾಯ: ವಿದ್ಯಾರ್ಥಿಗಳು ಮಾತ್ರವಲ್ಲ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾರಹಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳ ಶಿಕ್ಷಕರು, ಬೈಕ್‌ ಹೊಂದಿದ್ದರೆ ಹೆಲ್ಮೆಟ್‌ ಕಡ್ಡಾಯವಾಗಿ ಹಾಕಿರಬೇಕು. ಕಾರು ಬಳಸುತ್ತಿದ್ದರೆ ಎಲ್ಲ ದಾಖಲೆಗಳ ಜತೆಗೆ ಸೀಟ್‌ ಬೆಲ್ಟ ಹಾಕಿಕೊಂಡೇ ಕಾಲೇಜಿಗೆ ಬರಬೇಕು. ಅವರೂ ನಿಯಮ ಉಲ್ಲಂಘಿಸಿದರೆ ದಂಡ ಬೀಳಲಿದೆ.

ಜಿಲ್ಲೆಯಲ್ಲಿ 40 ಸರ್ಕಾರಿ, 3 ಮೊರಾರ್ಜಿ ದೇಸಾಯಿ, 1 ಅಟಲ್‌ಬಿಹಾರಿ ವಾಜಪೇಯಿ ಪಪೂ ಕಾಲೇಜು ಸೇರಿ ಒಟ್ಟು 44 ಸರ್ಕಾರಿ ಪಪೂ ಕಾಲೇಜುಗಳಿವೆ. 38 ಅನುದಾನಿತ, 61 ಅನುದಾನ ರಹಿತ ಕಾಲೇಜುಗಳಿದ್ದು, ಎಲ್ಲಾ ಕಾಲೇಜುಗಳ ಉಪನ್ಯಾಸಕರು ಹೊಸ ನಿಯಮ ಪಾಲಿಸಲು ತಿಳಿಸಲಾಗಿದೆ. ಪಪೂ ಕಾಲೇಜು ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಗಿ ಇಲ್ಲದಿದ್ದರೂ ಬೈಕ್‌ ಸಮೇತ ಕಾಲೇಜಿಗೆ ಬರುತ್ತಿದ್ದು, ಇನ್ಮುಂದೆ ಉಪನ್ಯಾಸಕರು ನಿಗಾ ವಹಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ, ಕಾನೂನು ಪಾಲನೆ ದೃಷ್ಟಿಯಿಂದ ಎಲ್ಲರೂಸಹಕರಿಸಬೇಕು. –ಶಶಿಧರ ಪೂಜಾರಿ, ಉಪ ನಿರ್ದೇಶಕ, ಪಪೂ ಶಿಕ್ಷಣ ಇಲಾಖೆ

ಕಾಲೇಜು ವಿದ್ಯಾರ್ಥಿಗಳು, ದಾಖಲೆ ಮತ್ತು ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುತ್ತಿದ್ದು, ಅದನ್ನು ತಡೆಗಟ್ಟುವ ಜತೆಗೆ ಪ್ರತಿಯೊಂದು ಹಂತದಲ್ಲೂ ಕಾನೂನು ಅನುಷ್ಠಾನ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಕಾಲೇಜುಗಳ ಮುಖ್ಯಸ್ಥರು, ಪ್ರಾಚಾರ್ಯರು ಒಪ್ಪಿದ್ದಾರೆ. ಇದು ಸೆ.27ರಿಂದ ಜಿಲ್ಲೆಯಾದ್ಯಂತ ಜಾರಿಗೊಳ್ಳಲಿದೆ.-ಲೋಕೇಶ ಜಗಲಾಸರ, ಎಸ್ಪಿ

18 ಸರ್ಕಾರಿ, 45 ಖಾಸಗಿ ಪದವಿ ಕಾಲೇಜುಗಳಿದ್ದು, ಸುಮಾರು 28 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಬೈಕ್‌, ಕಾರು ಸಮೇತ ಕಾಲೇಜಿಗೆ ಬರುವುದು ರೂಢಿ. ಅವರೆಲ್ಲ ಇನ್ಮುಂದೆ ಕಡ್ಡಾಯವಾಗಿ ವಾಹನ ದಾಖಲೆ ಸಮೇತ ಹೆಲ್ಮೆಟ್‌, ಸೀಟ್‌ ಬೆಲ್ಟ್ ಧರಿಸಿ ಕಾಲೇಜಿಗೆ ಬರಬೇಕು. ಈ ನಿಯಮ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ. ಎಲ್ಲ ಕಾಲೇಜುಗಳಲ್ಲಿ ಪಾಲನೆ ಮಾಡಲಾಗುವುದು. -ಡಾ| ಅರುಣಕುಮಾರ ಗಾಳಿ, ಜಿಲ್ಲಾ ನೋಡಲ್‌ ಅಧಿಕಾರಿ, ಉನ್ನತ ಶಿಕ್ಷಣ ಇಲಾಖೆ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next