ಕಲಬುರಗಿ: ಖಾಸಗಿ ಶಾಲೆಯಲ್ಲಿ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಬಂದರೆ ಪ್ರವೇಶಕ್ಕೆ ನಿರಾಕರಿಸುವುದನ್ನು ಕೇಳುತ್ತೇವೆ. ಆದರೆ ಇಲ್ಲಿ ಸರ್ಕಾರಿ ಶಾಲೆಯಲ್ಲೇ ಪ್ರವೇಶಾತಿ ನೀಡಲು ನಿರಾಕರಿಸಲಾಗುತ್ತಿದೆ.
ಅಫಜಲಪುರ ತಾಲೂಕಿನ ಗೊಬ್ಬುರ ಬಿ ಸರ್ಕಾರಿ ಪ್ರೌಢ ಶಾಲೆಯ ಎಂಟನೇ ತರಗತಿಯ ಪ್ರವೇಶಾತಿಗೆ ನಿರಾಕರಿಸಲಾಗುತ್ತಿದೆ. ಹೀಗಾಗಿ ಪ್ರವೇಶಾತಿ ಬಯಸಿರುವ 30 ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಶಾಲೆಯಲ್ಲೇ ಈಗಾಗಲೇ 500 ವಿದ್ಯಾರ್ಥಿಗಳಿದ್ದು, ಹೀಗಾಗಿ ಪ್ರವೇಶಾತಿ ನೀಡದೆ ಶಾಲೆಯ ಪ್ರಾಚಾರ್ಯರು ಸತಾಯಿಸುತ್ತಿದ್ದಾರೆ. ಇದರಿಂದ ಹೈಸ್ಕೂಲು ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಉತ್ಸಾಹ ತಗ್ಗಿಸುವಂತೆ ಮಾಡಿದೆ.
ಗೊಬ್ಬುರ ಬಿ ಗ್ರಾಮದ ಸಮೀಪದ ಅವರಳ್ಳಿ ಗ್ರಾಮದಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸರ್ಕಾರಿ ಶಾಲೆಯಿದೆ. ಮುಂದಿನ ಶಿಕ್ಷಣ ಮುಂದುವರೆಸಲು ಪ್ರೌಢ ಶಾಲೆಯಿಲ್ಲ. ಹೀಗಾಗಿ ಶಿಕ್ಷಣ ಮುಂದುವರೆಸಲು ಅನಿವಾರ್ಯವಾಗಿ ಗೊಬ್ಬುರ ಬಿ ಗ್ರಾಮಕ್ಕೆ ಬರಬೇಕಾಗಿದೆ. 30 ಶಾಲಾ ಮಕ್ಕಳು ತಮ್ಮ ಟಿಸಿ ಹಾಗೂ ಅಂಕ ಪಟ್ಟಿಯೊಂದಿಗೆ ಶಾಲೆಗೆ ಬಂದರೆ ಶಾಲೆಯ ಪ್ರಾಚಾರ್ಯರು ತಮಗೆ ಪ್ರವೇಶಾತಿಗೆ ಇಲ್ಲವೆಂದು ಹೇಳಿರುವುದು ಮಕ್ಕಳಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹೀಗಾಗಿ ಮಕ್ಕಳು ಮುಂದೇನೆಂದು ಚಿಂತಾಕ್ರಾಂತರಾಗಿದ್ದು, ಪ್ರವೇಶಾತಿ ಕಲ್ಪಿಸಬೇಕೆಂದು ಹಠ ಹಿಡಿದು ಮಕ್ಕಳು ಶಾಲೆ ಎದುರು ಪ್ರತಿಭಟಿಸಿದ್ದಾರೆ.
ಇದನ್ನೂ ಓದಿ:ರಾಜ್ಯ ಮತ್ತು ಜನರನ್ನು ಉಳಿಸಲು 2023 ರ ಚುನಾವಣೆ ಗೆಲ್ಲಬೇಕಾಗಿದೆ: ಸಿದ್ದರಾಮಯ್ಯ
ಪ್ರವೇಶಾತಿ ಗೆ ನಿರಾಕರಿಸಲಾಗುತ್ತಿದೆ ಎಂಬುದನ್ನು ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತದೆ. ಮುಖ್ಯೋಪಾಧ್ಯಯರಿಗೆ ಹೇಳಲಾಗಿದೆ ಎನ್ನುತ್ತಾರೆ. ಈತ್ತ ಮುಖ್ಯ ಗುರುಗಳು, ಈಗಾಗಲೇ 500 ಮಕ್ಕಳಿದ್ದಾರೆ. ಇನ್ನಷ್ಟು ಪ್ರವೇಶಾತಿ ಮಾಡಿಕೊಂಡರೆ ಶಿಕ್ಷಣ ಕಲಿಸುವುದು ಹೇಗೆ? ಪ್ರಮುಖವಾಗಿ ಕೇವಲ 10 ಜನ ಶಿಕ್ಷಕರಿದ್ದಾರೆ ಎಂದು ಸಮಸ್ಯೆ ಹೇಳುತ್ತಾ ಪ್ರವೇಶಾತಿ ನಿರಾಕರಿಸುತ್ತಿದ್ದಾರೆ. ಪ್ರೌಢ ಶಿಕ್ಷಣ ಮುಂದುವರೆಸಲು ಅವರಳ್ಳಿ ಗ್ರಾಮದಲ್ಲೇ ಸರ್ಕಾರಿ ಪ್ರೌಢ ಶಾಲೆಗೆ ಅನುಮತಿ ನೀಡಿದರೆ ಗ್ರಾಮದಲ್ಲೇ ಶಿಕ್ಷಣ ಮುಂದುವರೆಸುತ್ತೇವೆಂದು ಮಕ್ಕಳು ಅಳಲು ತೋಡಿಕೊಳ್ಳುತ್ತಿದ್ದಾರೆ.